ದೇವನಹಳ್ಳಿ: ಬೆಂಗಳೂರು ಗ್ರಾಮಾಂತರದ ವಿಜಯಪುರ ಪುರಸಭೆಯ ಗದ್ದುಗೆಗೆ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ನಡೆಯುತ್ತಿದೆ. ಪುರಸಭೆಯಿಂದ ವರ್ಗಾವಣೆಯಾಗಿದ್ದ ಮುಖ್ಯಾಧಿಕಾರಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರೆ, ಮತ್ತೊಬ್ಬ ಅಧಿಕಾರಿ ವರ್ಗಾವಣೆಗೆ ಮಾತ್ರ ತಡೆಯಾಜ್ಞೆ ತಂದಿರುವುದು ಎಂದು ಹುದ್ದೆ ಬಿಟ್ಟುಕೊಡಲು ನಿರಾಕರಿಸಿದ್ದಾರೆ.
ವಿಜಯಪುರ ಪುರಸಭೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಮೋಹನ್ ಕುಮಾರ್ ಮುಖ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಚುನಾವಣೆ ನಿಮಿತ್ತ ಮಾರ್ಚ್ 4 ರಂದು ಮುಖ್ಯಾಧಿಕಾರಿ ಮೋಹನ್ ಕುಮಾರ್ರನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ಗಂಗಾಧರ್ ಎಂಬ ಅಧಿಕಾರಿಯನ್ನು ನಗರಾಭಿವೃದ್ಧಿ ಇಲಾಖೆ ನೇಮಕ ಮಾಡಿ ಆದೇಶ ಹೊರಡಿಸಿತ್ತು. ವರ್ಗಾವಣೆ ಆದೇಶವನ್ನು ವಿರೋಧಿಸಿ ಮೋಹನ್ ಕುಮಾರ್ ನ್ಯಾಯಾಲಯದ ಮೆಟ್ಟಿಲೇರಿದ್ದು, ವರ್ಗಾವಣೆಯಾದ ಕೆಲವೇ ದಿನಗಳಿಗೆ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಅಷ್ಟೊತ್ತಿಗಾಗಲೇ ಗಂಗಾಧರ್ ಅಧಿಕಾರ ವಹಿಸಿಕೊಂಡಿದ್ದರು. ಸದ್ಯ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಗುದ್ದಾಟ ನಡೆಸುತ್ತಿದ್ದಾರೆ.
ಕೋರ್ಟ್ನಿಂದ ಸ್ಟೇ ತಂದಿರುವ ಮೋಹನ್ ಕುಮಾರ್ ಮಾತನಾಡಿ, "ಮಾರ್ಚ್ 4 ರಂದು ನನ್ನನ್ನು ವರ್ಗಾವಣೆ ಮಾಡಲಾಗಿತ್ತು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ನ್ಯಾಯಾಲಯವು ಆದೇಶ ಜಾರಿಯಾಗದಂತೆ ತೆಡೆಯಾಜ್ಞೆಯನ್ನು ಕೊಟ್ಟಿದೆ. ನಂತರ ನಾನು ಈ ಬಗ್ಗೆ ಜಿಲ್ಲಾಧಿಕಾರಿಗೆ ತಿಳಿಸಿ ಮಾರ್ಚ್ 15 ರಿಂದ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿದ್ದೇನೆ. ನಿನ್ನೆ ಏಕಾಏಕಿ ಕಚೇರಿಗೆ ಬಂದ ಗಂಗಾಧರ್ ಎಂಬುವವರು ತಡೆಯಾಜ್ಞೆ ಇದ್ದರೂ ಮತ್ತು ಮೇಲಾಧಿಕಾರಿಗಳ ಆದೇಶ ಇಲ್ಲದೇ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ" ಎಂದರು.
"ಅವರು ನಿನ್ನೆ ಕಚೇರಿಗೆ ಬೀಗ ಹಾಕಿಕೊಂಡು ಹೋಗಿದ್ದರು. ಇಂದು ಸಹ ನಾನು ಚುನಾವಣಾ ಕರ್ತವ್ಯದಲ್ಲಿರುವಾಗ ಕಚೇರಿಗೆ ಬಂದು ಮುಖ್ಯಾಧಿಕಾರಿಗಳ ಕುರ್ಚಿಯಲ್ಲಿ ಕುಳಿತುಕೊಂಡು ಅನಧಿಕೃತವಾಗಿ ಅಧಿಕಾರವನ್ನು ಚಲಾಯಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಮತ್ತು ಯೋಜನಾ ಅಧಿಕಾರಿಗಳಿಗೆ ದೂರು ಸಲ್ಲಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇನೆ. ಅವರು ಕೆಲವು ದಿನಗಳವರೆಗೆ ಕಾಯುವಂತೆ ಹೇಳಿದ್ದಾರೆ" ಎಂದು ಹೇಳಿದರು.
ನೂತನ ಮುಖ್ಯಾಧಿಕಾರಿ ಗಂಗಾಧರ್ ಮಾತನಾಡಿ, "ನಗರಾಭಿವೃದ್ಧಿ ಇಲಾಖೆ ಚುನಾವಣಾ ಕಾರ್ಯಕ್ಕಾಗಿ ನನ್ನನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆದರ ಆಧಾರದ ಮೇಲೆ ಮಾರ್ಚ್ 6 ರಂದು ನಾನು ಅಧಿಕಾರ ವಹಿಸಿಕೊಂಡೆ. ಹಿಂದೆ ಮುಖ್ಯಾಧಿಕಾರಿಯಾಗಿದ್ದ ಮೋಹನ್ ಕುಮಾರ್ ನ್ಯಾಯಾಲಯದಲ್ಲಿ ಸ್ಟೇ ತಂದಿದ್ದಾರೆ. ಕೋರ್ಟ್ ತಡೆಯಾಜ್ಞೆಯನ್ನು ಮಾತ್ರ ನೀಡಿದೆ. ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ನನಗಾಗಲಿ, ಅವರಿಗಾಗಲಿ ಹೇಳಿಲ್ಲ. ನಾನು ಇಲ್ಲಿಗೆ ಬಂದು ಅಧಿಕಾರ ವಹಿಸಿಕೊಂಡ ನಂತರ ಕೋರ್ಟ್ ಸ್ಟೇ ಕೊಟ್ಟಿದೆ" ಎಂದರು.
"ನಾನು ಈಗಾಗಲೇ 10 ದಿನ ಕರ್ತವ್ಯ ನಿರ್ವಹಿಸಿದ್ದೀನಿ. ನನಗೆ ಅಧಿಕಾರ ಹಸ್ತಾಂತರಿಸಿ ಎಂದು ನಗರಾಭಿವೃದ್ಧಿ ಇಲಾಖೆ ಅಥವಾ ಕೋರ್ಟ್ನಿಂದ ಯಾವುದೇ ಸೂಚನೆ ಬಂದಿಲ್ಲ. ನಾನು ಕೋರ್ಟ್ಗೆ ಹೊದಾಗ ಸ್ಟೇ ನೀಡಿರುವುದು ವರ್ಗಾವಣೆ ಮಾತ್ರ ಎಂದು ತಿಳಿಯಿತು. ಹೀಗಾಗಿ ನಾನು ಇಂದು ಎಂದಿನಂತೆ ಬಂದು ಕರ್ತವ್ಯಕ್ಕೆ ಹಾಜರಾಗಿದ್ದೀನಿ" ಎಂದು ಹೇಳಿದರು.
ಇನ್ನು ಪುರಸಭೆ ಕಚೇರಿಯ ಅಕ್ಕಪಕ್ಕದಲ್ಲೇ ಇಬ್ಬರು ಮುಖ್ಯಾಧಿಕಾರಿಗಳು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇಬ್ಬರು ಅಧಿಕಾರಿಗಳ ಕರ್ತವ್ಯ ನಿರ್ವಹಣೆಯಿಂದ ಸಿಬ್ಬಂದಿ ಮತ್ತು ಜನರಲ್ಲಿ ಗೊಂದಲ ನಿರ್ಮಾಣವಾಗಿದೆ. ಇಬ್ಬರ ಅಧಿಕಾರ ಕಿತ್ತಾಟದಿಂದ ಸಾರ್ವಜನಿಕರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟ ಆಯೋಗ: 72.30 ಲಕ್ಷ ನಗದು, 23 ಸಾವಿರ ಲೀಟರ್ ಮದ್ಯ ವಶ