ನೆಲಮಂಗಲ: ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆಯೊಂದು ದಾಳಿ ಮಾಡಿದ್ದು, ಶ್ವಾನ ಸಹ ಪ್ರತಿದಾಳಿ ಮಾಡಿ ಮನೆಯವರನ್ನು ಎಚ್ಚರಿಸಿದೆ. ಮನೆಯವರು ಹೊರಗೆ ಬಂದಾಗ ಚಿರತೆ ಹೆದರಿ ಓಡಿ ಹೋದ ಘಟನೆ ನೆಲಮಂಗಲ ತಾಲೂಕಿನ ತೊರೆಕೆಂಪೋಹಳ್ಳಿಯಲ್ಲಿ ನಡೆದಿದೆ.

ತೊರೆಕೆಂಪೋಹಳ್ಳಿ ಗ್ರಾಮದ ಅನಿಲ್ ಎಂಬುವವರು ತಮ್ಮ ಮನೆಯ ಮುಂದೆ ನೆಚ್ಚಿನ ನಾಯಿ ಕಟ್ಟಿ ಹಾಕಿದ್ದರು. ಮುಂಜಾನೆ ಸುಮಾರು 5 ಗಂಟೆಗೆ ಚಿರತೆ ಶ್ವಾನದ ಮೇಲೆ ದಾಳಿ ನಡೆಸಿದೆ. ಇದರಿಂದ ಕಂಗೆಡದ ಶ್ವಾನ ಪ್ರತಿದಾಳಿ ನಡೆಸಿದೆ. ಶ್ವಾನದ ಕೂಗಾಟ ಕೇಳಿ ಹೊರಬಂದ ಮನೆಯವರನ್ನು ನೋಡಿದ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ಅದೃಷ್ಟವಶಾತ್ ಶ್ವಾನದ ಪ್ರಾಣ ಉಳಿದಿದೆ.
ಚಿರತೆ ಬಂದು ದಾಳಿ ಮಾಡಿ ಹೋಗಿರುವ ಹೆಜ್ಜೆ ಗುರುತುಗಳು ಹೊಲದಲ್ಲಿದೆ. ಗ್ರಾಮದಲ್ಲಿ ಚಿರತೆ ಕಾಟವಿದ್ದರೂ ನೆಲಮಂಗಲ ಅರಣ್ಯ ಇಲಾಖೆ ಅವನ್ನು ನಿಯಂತ್ರಣ ಮಾಡದೆ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಚಿರತೆ ಹಿಡಿಯಲು ಬೋನ್ ಇಡುವಂತೆ ಆಗ್ರಹಿಸಿದ್ದಾರೆ.