ಬೆಂಗಳೂರು: ನಿಮಗೆ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಬೇಕೇ ಎಂಬ ಆನ್‌ಲೈನ್ ಜಾಹೀರಾತು ನೋಡಿ ನಿಮ್ಮ ಅಪ್ಲಿಕೇಷನ್ ಕಳುಹಿಸಿದ್ದೀರಾ? ಹಾಗಾದರೆ, ಈ ಸ್ಟೋರಿ ಓದಲೇಬೇಕು. ರಾಜ್ಯದ ರಾಜಧಾನಿಯಲ್ಲಿ ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ಲೊಗೋಗಳನ್ನು ಸೃಷ್ಟಿಸಿ ಹಣ ಮಾಡುವ ನಕಲಿ ಕಂಪೆನಿಗಳ ಜಾಲ ನಾಯಿಕೊಡೆಗಳಂತೆ ಬೆಳೆದು ನಿಂತಿವೆ.
ಕೆಲಸ ಕೊಡಿಸುವುದಾಗಿ ಸಂದರ್ಶನ ನಡೆಸಿ, ಐಬಿಎಂ ಕಂಪೆನಿಯ ಹೆಸರಲ್ಲಿ ಆಫರ್ ಲೇಟರ್ ನೀಡಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಪುಣೆ ಮೂಲದ ಸಂಜೀವ್ ಗಂಗರಾಮ್ ಗೋರ್ಖಾ ಎಂಬ ವ್ಯಕ್ತಿಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈತನ ಜೊತೆ ಮತ್ತೆ ಮೂವರು ವಂಚಕರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಕಾಳಿಪ್ರಸಾದ್, ಅಭಿಜಿತ್ ಹಾಗೂ ಅಭಿಷೇಕ್ ಮೊಹಾಂತಿ ಎಂದು ಗುರುತಿಸಲಾಗಿದೆ.
ಒಎಲ್‌ಎಕ್ಸ್, ನೌಕರಿ ಡಾಟ್ ಕಮ್ ಸೇರಿದಂತೆ ಆನ್‌ಲೈನ್ ಜಾಲತಾಣಗಳ ಮೂಲಕ ಐಬಿಎಂ, ಕಾಗ್ನಿಜೆಂಟ್ ಕಂಪೆನಿಗಳಲ್ಲಿ ಕೆಲಸ ಖಾಲಿಯಿದೆ, ಆಸಕ್ತ ಅರ್ಹ ಅಭ್ಯರ್ಥಿಗಳು ಸಂಪರ್ಕಿಸಿ ಎಂದು ಪೋಸ್ಟ್ ಹಾಕುತ್ತಿದ್ದರು. ಈ ಪೋಸ್ಟ್ ನೋಡಿ ನಂಬುತ್ತಿದ್ದ ಕೆಲವರು ತಮ್ಮ ಪ್ರೊಫೈಲ್ ಕಳುಹಿಸುತ್ತಿದ್ದರು. ನಂತರ ಉದ್ಯೋಗಾಕಾಂಕ್ಷಿಗಳ ಫೋನ್‌ನಂಬರ್ ಪಡೆದು ಆನ್‌ಲೈನ್‌ನಲ್ಲಿ ನಕಲಿ ಸಂದರ್ಶನ ನಡೆಸುತ್ತಿದ್ದ ಇವರು ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಹಣ ಖರ್ಚಾಗಲಿದೆ ಎಂದು ಹೇಳಿ ಅಭ್ಯರ್ಥಿಗಳಿಂದ ಸಾವಿರಾರು ರೂಪಾಯಿ ಹಣ ಪಡೆಯುತ್ತಿದ್ದರು. ಬಳಿಕ ಐಬಿಎಂ ಕಂಪೆನಿಯ ಹೆಸರಿನ ನಕಲಿ ಲೋಗೊ, ಆಫರ್ ಲೆಟರ್ ಸೃಷ್ಟಿಸಿ, ಅಭ್ಯರ್ಥಿಗಳಿಗೆ ಕಳುಹಿಸಿ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಐಬಿಎಂ ಕಂಪೆನಿಯ ಹೆಚ್.ಆರ್(ಮಾನವ ಸಂಪನ್ಮೂಲ ಅಧಿಕಾರಿ) ಪ್ರದೀಪ್‌ನನ್ನು ಸಂಪರ್ಕಿಸಿ ಎಂದು ಸುಳ್ಳು ಹೇಳಿ ಕಳುಹಿಸುವ ನಯವಂಚಕರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದರು.
ಇವರ ಮೋಸದ ಜಾಲಕ್ಕೆ ದುಡ್ಡು ಸುರಿದ ಮುಗ್ದ ಅಭ್ಯರ್ಥಿಗಳು ಐಬಿಎಂ ಕಂಪೆನಿಗೆ ಹೋಗಿ ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳು ಮೋಸ ಹೋಗಿರುವುದು ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಂಪಿಗೆಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇದುವರೆಗೂ 40ಕ್ಕಿಂತ ಹೆಚ್ಚು ಮಂದಿಗೆ ಮೋಸ ಮಾಡಿರುವುದು ಪತ್ತೆಯಾಗಿದೆ. ಅಲ್ಲದೇ, ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 8 ಬ್ಯಾಂಕ್ ಅಕೌಂಟ್‌ಗಳನ್ನು ಹೊಂದಿರುವುದು ಬಯಲಾಗಿದೆ. ಆರೋಪಿಗಳ ವಿರುದ್ಧ ಬೆಂಗಳೂರಿನಲ್ಲಿ 5 ಹಾಗೂ ಮಹಾರಾಷ್ಟ್ರದಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.