ಬೆಂಗಳೂರು: ನೀರಿನ ಟ್ಯಾಂಕರ್ಗೆ ಹಿಂಬದಿಯಿಂದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ನಲ್ಲಿದ್ದ 15 ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಚಿಕ್ಕಸಣ್ಣೆ ಗೇಟ್ ಬಳಿ ನಡೆದಿದೆ.
ಬಸ್ ಚಿಕ್ಕಬಳ್ಳಾಪುರ ಕಡೆಯಿಂದ ಬೆಂಗಳೂರಿಗೆ ಹೋಗುತಿದ್ದಾಗ ಬಿಬಿ ರಸ್ತೆಯ ಚಿಕ್ಕಸಣ್ಣೆ ಗೇಟ್ ಬಳಿ ಈ ಅವಘಡ ಸಂಭವಿಸಿದೆ. ಘಟನೆ ನಡೆಯಲು ಬಸ್ ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗಿದ್ದು, ಕೈಯಲ್ಲಿ ಮೊಬೈಲ್ ಹಿಡಿದು ಅತಿ ವೇಗವಾಗಿ ಬಸ್ ಚಾಲನೆ ಮಾಡಿದ್ದೇ ದುರ್ಘಟನೆಗೆ ಕಾರಣ ಎನ್ನಲಾಗಿದೆ. ನೀರಿನ ಟ್ಯಾಂಕರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ನಂತರ ಡಿವೈಡರ್ ಮೇಲೆ ಹತ್ತಿಸಿದ್ದಾನೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಾದ ವೆಂಕಟೇಶ್, ಪವಿತ್ರ, ವಿಜಯಕುಮಾರ್ , ಹರಿಪ್ರಸಾದ್, ಹೇಮಾವತಿ, ಪ್ರಸಾದ್, ಪ್ರಸಾದ್, ಶಾಹಿದಾ, ಶ್ರುತಿ, ಸುನಿಲ್, ನಾಗರಾಜ್, ರೋಶಿನಿ, ಚಾಲಕ ಮುನಿರಾಜ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಅಪಘಾತಕ್ಕೆ ಕಾರಣನಾದ KSRTC ಬಸ್ ಚಾಲಕ ಮುನಿರಾಜ್ ವಿರುದ್ಧ ದೂರು ದಾಖಲಿಸಿಕೊಂಡಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.