ನೆಲಮಂಗಲ: ಬೆಂಗಳೂರು ಹೊರವಲಯದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿರುವ ಕಾಗ್ನಿಟಿವ್ (ಅರಿವಿನ) ಕಂಪ್ಯೂಟಿಂಗ್ ಕುರಿತ ರಾಷ್ಟ್ರೀಯ ಸಮಾವೇಶಕ್ಕೆ ಇಂದು ಚಾಲನೆ ನೀಡಲಾಯಿತು.
ಹಿರಿಯ ವಿಜ್ಞಾನಿ ಬಿ.ಎಸ್.ಬಿಂಧು ಮಾಧವ ಸುದ್ದಿಗಾರರೊಂದಿಗೆ ಮಾತನಾಡಿ, ಗೂಗಲ್ ಮುಂತಾದ ತಂತ್ರಾಂಶಗಳು ಕಾಗ್ನಿಟಿವಿ ಕಂಪ್ಯೂಟರ್ ಆಧಾರದಲ್ಲಿ ಕೆಲಸ ಮಾಡುತ್ತದೆ. ಮನುಷ್ಯನ ಮನಸ್ಸಿನಂತೆ ಇದು ಕೆಲಸ ಮಾಡುತ್ತದೆ. ಕಂಪ್ಯೂಟರ್‍ನಲ್ಲಿ ಸುಧಾರಿತ ತಂತ್ರಜ್ಞಾನವೇ ಕಾಗ್ನಿಟಿವ್ ಕಂಪ್ಯೂಟಿಂಗ್ ಆಗಿದ್ದು, ಇದನ್ನು ಎಲ್ಲಾ ಕ್ಷೇತ್ರಗಳಲ್ಲೂ ಬಳಕೆ ಮಾಡಬಹುದು. ಕುಡಿಯುವ ನೀರು, ವಿದ್ಯುತ್, ಸಂಚಾರ ಸಮಸ್ಯೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಇದನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಇಂಜಿನಿಯರಿಂಗ್ ಕ್ಷೇತ್ರದ ಎಲ್ಲಾ ಅಂಶಗಳನ್ನು ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸಬಹುದು ಎಂಬುದರ ಬಗ್ಗೆ ಅರಿವು ಮೂಡಿಸುವುದೇ ಸಮಾವೇಶದ ಉದ್ದೇಶವಾಗಿದೆ. ಬೇರೆ-ಬೇರೆ ತಂತ್ರಜ್ಞಾನ ಕ್ಷೇತ್ರದಿಂದ ಹಲವು ತಾಂತ್ರಿಕ ಪ್ರಬಂಧಗಳು ಮಂಡನೆಯಾಗಿದ್ದು, ಅವರ ಯೋಜನೆಗೆ ಇದು ಉತ್ತಮ ವೇದಿಕೆಯಾಗಿದೆ. ದೈನಂದಿನ ಸಮಸ್ಯೆಗಳು ಅಥವಾ ಕಾರ್ಯಗಳಿಗೆ ನಿಗದಿತ ವೇಳೆಯಲ್ಲಿ ಪರಿಹಾರ ಕಂಡುಕೊಳ್ಳುವುದು ಇದರ ಗುರಿಯಾಗಿದೆ ಎಂದು ತಿಳಿಸಿದರು.
ಇದೇ ವೇಳೆ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಮೋಹನ್ ಮಾತನಾಡಿ, ಕಂಪ್ಯೂಟರ್ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಹೊಸ ವಿಷಯಗಳ ಬಗ್ಗೆ ಇಲ್ಲಿ ಚರ್ಚೆ ನಡೆಸಲಾಗುತ್ತದೆ. ಕೃತಕ ಬುದ್ಧಿ, ಮಿಷನ್ ಲರ್ನಿಂಗ್, ಅನುಭವದ ಮೂಲಕ ಕಲಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಮಾಲೋಚನೆ ನಡೆಯಲಿದೆ. ಎರಡು ದಿನಗಳ ಈ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳಿಂದ ತಜ್ಞರು, ವಿದ್ಯಾರ್ಥಿಗಳು ಆಗಮಿಸಿದ್ದಾರೆ. 100 ಪ್ರತಿನಿಧಿಗಳು, 300 ವಿದ್ಯಾರ್ಥಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಒಟ್ಟು 75 ಪ್ರಬಂಧಗಳು ಮಂಡನೆಯಾಗಿದ್ದು, ಅವುಗಳಲ್ಲಿ 49 ಪ್ರಬಂಧಗಳು ಸ್ವೀಕೃತವಾಗಿವೆ ಎಂದು ತಿಳಿಸಿದರು.
ಸಮಾವೇಶಕ್ಕೆ ಹಿರಿಯ ವಿಜ್ಞಾನಿ ಬಿ.ಎಸ್.ಬಿಂಧು ಮಾಧವ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಮೋಹನ್ ಪ್ರೊಫೆಸರ್ ರಾಧಾ ಪದ್ಮನಾಭನ್, ಉಪ ಕುಲಪತಿ ಪ್ರೆಸಿಡೆನ್ಸಿ ಯೂನಿವರ್ಸಿಟಿ ಬೆಂಗಳೂರು, ಡಾ.ಬಿಸ್ವಾಸ್, ಕುಲಸಚಿವ, ಪ್ರೆಸಿಡೆನ್ಸಿ ಯೂನಿವರ್ಸಿಟಿ, ಡಾ. ಪ್ರಭಾಕರ ರೆಡ್ಡಿ, ಡೀನ್ ಸ್ಕೂಲ್ ಆಫ್ ಎಂಜಿನಿಯರಿಂಗ್, ಡಾ. ಎಂ ಈಶ್ವರ್ ಭಟ್ ಪ್ರೊ. ವೈಸ್ ಚಾನ್ಸಲರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.