ಬೆಂಗಳೂರು: 100 ವರ್ಷಗಳ ಇತಿಹಾಸ ಹೊಂದಿದ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿರುವ ಕಲ್ಯಾಣಿಯಲ್ಲಿ ಗ್ರಾಮದ ಒಳಚರಂಡಿ ನೀರು ಸಂಗ್ರಹವಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ.
2017-18ರಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಈ ಕಲ್ಯಾಣಿ ಜೀರ್ಣೋದ್ಧಾರ ಮಾಡಲಾಗಿತ್ತು. ಆದರೆ, ಇದೀಗ ಗ್ರಾಮದ ಒಳಚರಂಡಿ ನೀರೆಲ್ಲ ಇಲ್ಲಿ ಬಂದು ಸಂಗ್ರಹವಾಗುತ್ತಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಸುಮಾರು 9 ಲಕ್ಷ 97 ಸಾವಿರ ರೂ. ಮೊತ್ತದಲ್ಲಿ ನಿರ್ಮಿಸಲಾದ ಈ ಕಲ್ಯಾಣಿಯಲ್ಲಿ ಮದ್ಯದ ಬಾಟಲಿಗಳು, ಕಸ-ಕಡ್ಡಿ ಇತ್ಯಾದಿ ವಸ್ತುಗಳನ್ನು ಇಲ್ಲಿ ಎಸೆಯಲಾಗುತ್ತಿದ್ದು ಸಾಲದೆಂಬಂತೆ ಇಡೀ ಗ್ರಾಮದ ಒಳಚರಂಡಿ ನೀರು ಸಹ ಇಲ್ಲಿಯೇ ಬಂದು ಸಂಗ್ರವಾಗುತ್ತಿದೆ. ಕಲ್ಯಾಣಿ ಎಂದರೆ ಸ್ವಚ್ಛ ಹಾಗೂ ಶುದ್ಧವಾದ ನೀರು ಇರಬೇಕು.
ಆದರೆ, ಕೊಳಚೆ ನೀರು ಹರಿಬಿಡಲಾಗುತ್ತಿದೆ. ಇನ್ನೊಂದೆಡೆ ಇದೀಗ ಕಲ್ಯಾಣಿಯಲ್ಲಿ ನೀರಿಲ್ಲ. ಒಂದು ವೇಳೆ ನೀರಿದ್ದಿದ್ದರೆ ಯಾರಾದರೂ ಆಯಾ ತಪ್ಪಿ ಬೀಳುವ ಸಾಧ್ಯತೆ ಸಹ ಇದೆ. ಹಾಗಾಗಿ ಕಲ್ಯಾಣಿಯ ಸುತ್ತಲೂ ತಡೆಗೋಡೆ ಅಥವಾ ತಂತಿಬೇಲಿ ನಿರ್ಮಿಸಬೇಕು ಎನ್ನುತ್ತಾರೆ ಸ್ಥಳೀಯರು.