ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಅನುಮಾನಾಸ್ಪದವಾಗಿ ಪಾರ್ಕ್ ಮಾಡಲಾಗಿದ್ದ ಕಾರು ಪತ್ತೆಯಾಗಿದೆ. ಈ ಕಾರನ್ನು ಪರಿಶೀಲನೆ ಮಾಡಿದಾಗ ಕಾರ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಾಯಿ ಕಂಡುಬಂದಿದೆ. ಕಾರ್ನ ಕಿಟಕಿಯ ಗಾಜು ಒಡೆದು ಸಿಐಎಸ್ಎಫ್ ಯೋಧರು ನಾಯಿಯನ್ನು ರಕ್ಷಣೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನಿಂದ ದುಬೈಗೆ ಪ್ರಯಾಣಿಸಿದ ವ್ಯಕ್ತಿಯನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಆಗಸ್ಟ್ 7ರ ಸಂಜೆ 5 ಗಂಟೆ ಸಮಯದಲ್ಲಿ ಟರ್ಮಿನಲ್‌ನ 1ರ ಲೈನ್ 3ರಲ್ಲಿ ಕಾರ್ ಪಾರ್ಕ್ ಮಾಡಲಾಗಿತ್ತು. ಕಾರು ನಿಂತಿದ್ದ ಜಾಗ ಪಾರ್ಕಿಂಗ್ ನಿಷೇಧಿತ ಪ್ರದೇಶವಾಗಿತ್ತು. ಅನುಮಾನದ ಮೇಲೆ ಏರ್ ಪೋರ್ಟ್ ಸಿಬ್ಬಂದಿ ಸಿಐಎಸ್ಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಾರು ಪರಿಶೀಲನೆ ನಡೆಸಿದಾಗ ಹಿಂಬದಿಯ ಸೀಟ್ನಲ್ಲಿ ನಾಯಿಮರಿ ಪತ್ತೆಯಾಗಿದೆ. ಕಾರಿನ ಕಿಟಕಿಯ ಗಾಜು ಒಡೆದ ಸಿಐಎಸ್ಎಫ್ ಯೋಧರು ನಾಯಿಯನ್ನು ರಕ್ಷಣೆ ಮಾಡಿದ್ದಾರೆ. ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ ಪಶು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಕರಣ ದಾಖಲು: ವಿಮಾನ ನಿಲ್ದಾಣದಲ್ಲಿ ಅಭದ್ರತೆಯ ವಾತಾವರಣ ಸೃಷ್ಟಿ ಮಾಡಿದ ಕಾರಣಕ್ಕೆ ಕಾರಿನಲ್ಲಿ ನಾಯಿ ಮರಿ ಬಿಟ್ಟು ಹೋದ ಪ್ರಯಾಣಿಕನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿಯನ್ನು ಪತ್ತೆ ಮಾಡಲು ಮುಂದಾದ ಅಧಿಕಾರಿಗಳು ಟರ್ಮಿನಲ್‌ನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದಾರೆ. ಮಧ್ಯಾಹ್ನ 3.52ರ ಸಮಯದಲ್ಲಿ ಕಾರು ಪಾರ್ಕ್ ಮಾಡಿರುವುದು ಗೊತ್ತಾಗಿದೆ. ಆತನ ಕೈಯಲ್ಲಿದ್ದ ಟಿಕೆಟ್ ಮೂಲಕ ಆತನ ಗುರುತು ಪತ್ತೆ ಮಾಡಿ ಬಂಧಿಸಲಾಗಿದೆ. ಬಂಧಿತ ವ್ಯಕ್ತಿ ಬೆಂಗಳೂರಿನ ಪಾಪಯ್ಯ ಲೇಔಟ್ನ ಕಸ್ತೂರಿ ನಗರದ ನಿವಾಸಿಯಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: Bengaluru crime: ಸಿನಿಮಾದಿಂದ ಪ್ರೇರಿತನಾಗಿ ಜ್ಯೋತಿಷಿ ಪುತ್ರನ ಅಪಹರಣ; 5 ಲಕ್ಷ ರೂ. ಬೇಡಿಕೆಯಿಟ್ಟಿದ್ದ ಕಿಡ್ನಾಪರ್ ಬಂಧನ