ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಷಯುಕ್ತ ನೀರು ಮತ್ತು ದೊಡ್ಡಬಳ್ಳಾಪುರ ನಗರಸಭೆ ತ್ಯಾಜ್ಯ ನೀರಿನಿಂದ ಅರ್ಕಾವತಿ ಪಾತ್ರದಲ್ಲಿ ಬರುವ ಕೆರೆಗಳ ರಕ್ಷಣೆಗಾಗಿ ಗ್ರಾಮಸ್ಥರು ಹೋರಾಟದ ಹಾದಿ ಹಿಡಿದಿದ್ದಾರೆ. ಹೋರಾಟದ ಖರ್ಚಿಗಾಗಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದಾರೆ.
ನಂದಿಬೆಟ್ಟದಲ್ಲಿ ಉಗಮವಾಗುವ ಅರ್ಕಾವತಿ ನದಿ ಕೆರೆಗಳ ಮೂಲಕ ದೊಡ್ಡಬಳ್ಳಾಪುರ ತಾಲೂಕನ್ನ ಹಾದು ಹೋಗುತ್ತದೆ. ಈ ನದಿ ಪ್ರಮುಖವಾಗಿ ರಾಜಘಟ್ಟಕೆರೆ, ನಾಗರಕೆರೆ, ದೊಡ್ಡತುಮಕೂರು ಕೆರೆ ಮೂಲಕ ಹಾದು ಹೋಗುತ್ತದೆ. 20 ವರ್ಷಗಳ ಹಿಂದೆ ದೊಡ್ಡತುಮಕೂರು ಕೆರೆ ನೀರನ್ನು ಗ್ರಾಮಸ್ಥರು ಕುಡಿಯಲು ಬಳಸುತ್ತಿದ್ದರು. ಆದರೆ, ಇವತ್ತು ಕೆರೆಯ ನೀರನ್ನು ಮುಟ್ಟಲು ಸಹ ಯೋಗ್ಯವಾಗಿಲ್ಲ. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಷಯುಕ್ತ ನೀರು ಮತ್ತು ದೊಡ್ಡಬಳ್ಳಾಪುರ ನಗರಸಭೆ ತ್ಯಾಜ್ಯದ ನೀರು ನೇರವಾಗಿ ಕೆರೆಯ ಒಡಲು ಸೇರುತ್ತಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಭಾರಿ ಮಳೆ : ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಬಂದ್, ಅಪಾರ ಬೆಳೆಹಾನಿ
ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ವತಿಯಿಂದ ರಾಜಘಟ್ಟಕೆರೆ, ನಾಗರಕೆರೆ, ದೊಡ್ಡತುಮಕೂರು ಗ್ರಾಮಸ್ಥರು ಕೆರೆಗಳ ಸಂರಕ್ಷಣೆಗಾಗಿ ಹೋರಾಟದ ಹಾದಿ ಹಿಡಿದಿದ್ದಾರೆ. ಆಕ್ಟೋಬರ್ 20 ರಂದು ಬಾಶೆಟ್ಟಿಹಳ್ಳಿಯ ಫ್ಯಾಕ್ಟರಿ ಸರ್ಕಲ್ನಲ್ಲಿ ರಸ್ತೆ ತಡೆ ಚಳವಳಿ ಮತ್ತು ಅರ್ಕಾವತಿ ನದಿ ಪಾತ್ರದಲ್ಲಿ ಪಾದಯಾತ್ರೆಯನ್ನು ಮಾಡುವ ಮೂಲಕ ಕೆರೆ ಸಂರಕ್ಷಣೆಗೆ ಮುಂದಾಗಿದ್ದಾರೆ. ಗ್ರಾಮಸ್ಥರೇ ಸ್ವಂತ ಹಣ ಹಾಕಿಕೊಂಡು ಹೋರಾಟವನ್ನ ಮಾಡುತ್ತಿದ್ದಾರೆ. ಮನೆ ಮನೆಗೂ ತೆರಳಿ ಭಿಕ್ಷಾಟನೆ ಮಾಡಿ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಭಿಕ್ಷಾಟನೆ ಹಣದಲ್ಲಿ ಹೋರಾಟದ ಕಿಚ್ಟನ್ನು ಸರ್ಕಾರಕ್ಕೆ ಮುಟ್ಟಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಕೆರೆ ಕೋಡಿ ನೀರಿನಲ್ಲಿ ಕೊಚ್ಚಿ ಹೋದ ಕಾರು: ಚಾಲಕ ಪಾರು
ಒಂದು ಕಾಲದಲ್ಲಿ ಅರ್ಕಾವತಿ ನದಿ ಪಾತ್ರದ ಹೆಸರಘಟ್ಟ ಕೆರೆ ನೀರನ್ನು ಬೆಂಗಳೂರು ನಗರಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಹೆಸರಘಟ್ಟ ಕೆರೆ ನೀರನ್ನು ಬೆಂಗಳೂರು ಜನರು ಕುಡಿಯಲು ಬಳಸುತ್ತಿದ್ದರು. ಆದರೆ ಇವತ್ತು ಇದೇ ಕೆರೆಗಳ ನೀರು ವಿಷಯುಕ್ತವಾಗಿದೆ.