ದೊಡ್ಡಬಳ್ಳಾಪುರ: ನಗರದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 1,300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇತ್ತೀಚೆಗೆ ಸ್ನಾತಕೋತ್ತರ ಪದವಿ ಸಹ ಪ್ರಾರಂಭವಾಗಿದ್ದು, ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವರವಾಗಿದೆ. ಆದ್ರೆ ಇಲ್ಲಿನ ಸಮಸ್ಯೆಗಳೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಆದರೆ, ಕಾಲೇಜು ಆವರಣದಲ್ಲಿ ಕಾಂಪೌಂಡ್ ಇಲ್ಲದ ಕಾರಣ ಲಾಕ್ಡೌನ್ ಅವಧಿಯಲ್ಲಿ ಕಿಡಿಗೇಡಿಗಳ ತಾಣವಾಗಿ ಮಾರ್ಪಟ್ಟಿದೆ. ಈ ಕಾಲೇಜು ಪ್ರತಿಷ್ಠಿತ ಕಾಲೇಜುಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸ್ಮಾರ್ಟ್ ಕ್ಲಾಸ್, ಅತ್ಯಾಧುನಿಕ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಹೊಂದಿದೆ. ಆದರೆ, ಕಾಲೇಜಿಗೆ ರಕ್ಷಣೆ ನೀಡಲು ಕಾಂಪೌಂಡ್ ಇಲ್ಲ. ಹೀಗಾಗಿ ಸಂಜೆಯಾಗುತ್ತಲೇ ಪುಂಡರು ಕಾಲೇಜು ಆವರಣದಲ್ಲಿ ಮದ್ಯ ಸೇವಿಸಿ, ಅಲ್ಲಲ್ಲಿ ಮದ್ಯದ ಬಾಟಲಿ, ಪ್ಲಾಸ್ಟಿಕ್ ಎಸೆಯುತ್ತಿದ್ದಾರೆ.
ಅನುದಾನ ಕೊರತೆಯಿಂದಾಗಿ ಕಾಲೇಜಿನ ಕಾಂಪೌಂಡ್ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕಾಲೇಜಿನ ಅರ್ಧ ಭಾಗಕ್ಕೆ ಮಾತ್ರ ಕಾಂಪೌಂಡ್ ನಿರ್ಮಿಸಲಾಗಿದ್ದು, ಇನ್ನುಳಿದ ಅರ್ಧ ಭಾಗ ಹಾಗೆಯೇ ಇದೆ. ಹೀಗಾಗಿ, ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಬೆಳೆಸಿದ್ದ ಗಿಡ, ಮರಗಳನ್ನು ಯಾರೋ ಕಡಿದು ಹಾಕಿದ್ದಾರೆ. ಜೊತೆಗೆ ಹಸು, ಕುರಿಗಳನ್ನು ಮೇಯಲು ಬಿಡುತ್ತಿದ್ದಾರೆ.
1,300ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ ಡಿ ಗ್ರೂಪ್ ನೌಕರರೇ ಇಲ್ಲ. ಇದ್ದ ಓರ್ವ ನೌಕರ ಕೂಡ ನಿವೃತ್ತಿಯಾಗಿದ್ದು, ಅವರ ಸ್ಥಾನಕ್ಕೆ ಮತ್ತೋರ್ವ ಸಿಬ್ಬಂದಿಯ ನೇಮಕವಾಗಿಲ್ಲ. ಸದ್ಯ ಕಾಲೇಜಿಗೆ 5 ಡಿ ಗ್ರೂಪ್ ನೌಕರರ ಅವಶ್ಯಕತೆ ಇದೆ. ಸರ್ಕಾರ ಡಿ ಗ್ರೂಪ್ ನೌಕರರ ನೇಮಕಾತಿ ಮಾಡದೇ ಇರುವುದರಿಂದ ಕಾಲೇಜಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಈಗಾಗಲೇ ಸಮಸ್ಯೆಗಳ ಬಗ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ ಪ್ರಾಂಶುಪಾಲರಾದ ಶ್ರೀನಿವಾಸ್ ತಿಳಿಸಿದ್ದಾರೆ.
ಇದನ್ನೂ ಓದಿ: 14 ತಿಂಗಳು ಕುಮಾರಸ್ವಾಮಿ ಅನುಭವಿಸಿದ್ದು ನರಕಯಾತನೆ; ಹೆಚ್‌ಡಿ ರೇವಣ್ಣ