ದೊಡ್ಡಬಳ್ಳಾಪುರ : ಇಂದು ದೊಡ್ಡಬಳ್ಳಾಪುರ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಯಾವ ಪಕ್ಷ ಅಧ್ಯಕ್ಷಗಾದಿ ಹಿಡಿಯುತ್ತಾರೆಂಬುದು ಯಕ್ಷ ಪ್ರಶ್ನೆಯಾಗಿದೆ. ಯಾವುದೇ ಪಕ್ಷಕ್ಕೆ ಸ್ವಷ್ಟ ಬಹುಮತ ಸಿಗದ ಹಿನ್ನಲೆಯಲ್ಲಿ ಜೆಡಿಎಸ್ ಬೆಂಬಲ ಪಡೆದುಕೊಳ್ಳುವುದು ಎರಡು ರಾಷ್ಟ್ರೀಯ ಪಕ್ಷಗಳಿಗೆ ಅನಿವಾರ್ಯವಾಗಿದೆ. ಆದ್ರೆ ಇಲ್ಲಿಯವರೆಗೂ ಕುಮಾರಸ್ವಾಮಿ ನಡೆ ಮಾತ್ರ ನಿಗೂಢವಾಗಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುವ ಚುನಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ದೊಡ್ಡಬಳ್ಳಾಪುರ ನಗರಸಭೆಯ 31 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಗಳಿಗೆ ಸ್ವಷ್ಟ ಬಹುಮತ ಸಿಕ್ಕಿಲ್ಲ, ಬಿಜೆಪಿ-12, ಕಾಂಗ್ರೆಸ್- 09, ಜೆಡಿಎಸ್-07, ಪಕ್ಷೇತರರು- 3 ಸ್ಥಾನಗಳನ್ನ ಪಡೆದಿವೆ. ನಗರಸಭೆ ಅಧ್ಯಕ್ಷರಾಗಲು 16 ಸ್ಥಾನಗಳ ಅವಶ್ಯಕತೆ ಇದ್ದು, ಯಾವುದೇ ಪಕ್ಷ ಸ್ವಷ್ಟ ಬಹುಮತ ಪಡೆಯದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಬೆಂಬಲ ಅನಿವಾರ್ಯವಾಗಿದೆ. ಇಂದು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಅಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಉದ್ಭವವಾಗಿದೆ.
ಅಧ್ಯಕ್ಷ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಕಾರ್ಯಚರಣೆ ನಡೆಸಿರುವ ಮೂರು ಪಕ್ಷಗಳು ಈಗಾಗಲೇ ರೆಸಾರ್ಟ್ ರಾಜಕೀಯದಲ್ಲಿ ತೊಡಗಿದ್ದು, ಬೇರೆ ಪಕ್ಷಗಳನ್ನ ತಮ್ಮ ಕಡೆ ಸೆಳೆಯಲು ಪ್ರಾರಂಭಿಸಿದ್ದಾರೆ. ತಮ್ಮ ಪಕ್ಷಗಳ ಸದಸ್ಯರನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಕಾರಣಕ್ಕೆ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ದೊಡ್ಡಬಳ್ಳಾಪುರ ನಗರಕ್ಕೆ ನಗರಸಭೆ ಸದಸ್ಯರು ನೂತನ ಅಧ್ಯಕ್ಷ ಆಯ್ಕೆಗೆ ಮತದಾನ ಮಾಡಲಿದ್ದಾರೆ. ಯಾವ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಸಿಗುತ್ತದೆಂಬ ಕುತೂಹಲವನ್ನ ಕೊನೆಯ ಕ್ಷಣದವರೆಗೂ ಕಾಯ್ದುಕೊಂಡಿದೆ.
ಕುಮಾರಸ್ವಾಮಿ ಸ್ವಾಮಿ ನಡೆ ನಿಗೂಢ
ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆ ಪ್ರಚಾರದಲ್ಲಿರುವ ಹೆಚ್.ಡಿ. ಕುಮಾರಸ್ವಾಮಿ ಎರಡು ರಾಷ್ಟ್ರೀಯ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದು, ಪಕ್ಷಗಳ ಮುಖಂಡರ ವಿರುದ್ಧ ಟೀಕೆಗಳನ್ನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಆರ್ಎಸ್ಎಸ್ ಬಗ್ಗೆ ಟೀಕೆ ಮಾಡಿರುವ ಕುಮಾರಸ್ವಾಮಿ ಚುನಾವಣೆಯ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದೇ ಸಮಯದಲ್ಲಿ ದೊಡ್ಡಬಳ್ಳಾಪುರ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದು ಮತ್ತು ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಯಾವುದಾದರೂ ಒಂದು ಪಕ್ಷಕ್ಕೆ ಬೆಂಬಲ ಕೊಡಬೇಕಾದ ಪರಿಸ್ಥಿತಿ ಇದೆ. ಆದರೆ ಇಲ್ಲಿಯವರೆಗೂ ಕುಮಾರಸ್ವಾಮಿ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವ ಭರವಸೆ ನೀಡಿಲ್ಲ. ಯಾವ ಪಕ್ಷ ತಮಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವುದೋ ಆ ಪಕ್ಷಕ್ಕೆ ಬೆಂಬಲ ಕೊಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ತಮ್ಮ ಬಿಡದಿ ತೋಟಕ್ಕೆ ಕರೆಸಿಕೊಂಡು ಮಾತನಾಡಿರುವ ಕುಮಾರಸ್ವಾಮಿ ನಂತರ ದೇವನಹಳ್ಳಿಯ ರೆಸಾರ್ಟ್ನಲ್ಲಿ ಸದಸ್ಯರನ್ನ ಇಟ್ಟಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಕುಮಾರಸ್ವಾಮಿಯ ಸಂಪರ್ಕದಲ್ಲಿದೆ.