ದೇವನಹಳ್ಳಿ (ಬೆಂಗಳೂರು ಗ್ರಾ): ಡಾಬಾದಲ್ಲಿ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಕ್ರಿಕೆಟ್ ಪಂದ್ಯದ ಸೋಲು ಗೆಲುವಿನ ಮೇಲೆ ಕ್ರಿಕೆಟ್ ಬೆಟ್ಟಿಂಗ್ ಆಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ 7 ಜನರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ 36,750 ರೂ. ನಗದು ಜಪ್ತಿ ಮಾಡಿದ್ದಾರೆ.
ನವೆಂಬರ್ 25 ರಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಕ್ರಿಕೆಟ್ ಪಂದ್ಯವಿತ್ತು. ದೇವನಹಳ್ಳಿ ಪಟ್ಟಣದ ದೊಡ್ಡಬಳ್ಳಾಪುರ ಜಂಕ್ಷನ್ ಬಳಿಯ ಗ್ರೀನ್ ಪಾರ್ಕ್ ಡಾಬಾದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಬಳಿಕ ಡಾಬಾ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಏಳು ಮಂದಿ ಸಿಕ್ಕಿಬಿದ್ದಿದ್ದು, ಮೂವರು ಪರಾರಿಯಾಗಿದ್ದಾರೆ.
ಪ್ರೀತಮ್, ಮಂಜುನಾಥ, ಚೇತನ್, ಜಗದೀಶ್, ವಿನೋದ ಎಂ, ವಿನೋದ್ ಕುಮಾರ್, ಚರಣ್ ಪೊಲೀಸರಿಗೆ ಸಿಕ್ಕಿ ಬಿದ್ದ ಆರೋಪಿಗಳು. ಪರಾರಿಯಾದ ರವಿಚಂದ್ರ, ಶೇಖರ್ ಗೌಡ ಮತ್ತು ಕಿರಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕ್ರಿಕೆಟ್ ಬೆಟ್ಟಿಂಗ್ಗೆ ಇಡಲಾಗಿದ್ದ 35,750 ರೂಪಾಯಿ ಹಣ ಮತ್ತು ಒಂದು ಮೊಬೈಲ್ ಜಪ್ತಿ ಮಾಡಲಾಗಿದೆ. ನ್ಯೂಜಿಲೆಂಡ್ ಗೆದ್ದರೆ 1000ಕ್ಕೆ 1,700 ರೂ., ಭಾರತ ಗೆದ್ದರೆ 700 ರೂಪಾಯಿಗೆ 1000 ರೂ. ರೇಷಿಯೋದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದರು ಎನ್ನಲಾಗ್ತಿದೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕ್ರಿಕೆಟ್ ಬೆಟ್ಟಿಂಗ್: ಹಣ ವಸೂಲಿಗಿಳಿದ್ರಾ ಸದಾಶಿವನಗರ ಪೊಲೀಸ್ ಕಾನ್ಸ್ಟೇಬಲ್?