ವಾಶಿಂಗ್ಟನ್(ಯುಎಸ್ಎ): ಜನವರಿಯಲ್ಲಿ ತಾವು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಗಾಜಾದಲ್ಲಿ ಬಂಧಿಯಾಗಿರಿಸಿಕೊಂಡಿರುವ ಎಲ್ಲಾ ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಯೋತ್ಪಾದಕ ಸಂಘಟನೆ ಹಮಾಸ್ಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.
'ನರಕ ದರ್ಶನ ಮಾಡಿಸುತ್ತೇನೆ': ಯಾವುದೇ ಭಯೋತ್ಪಾದಕ ಸಂಘಟನೆಯ ಹೆಸರು ಹೇಳದೆ ಸೋಮವಾರ ಸಾಮಾಜಿಕ ಮಧ್ಯಮ 'ಟ್ರೂತ್ ಸೋಷಿಯಲ್'ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, "ನಾನು ಅಮೆರಿಕದ ಅಧ್ಯಕ್ಷನಾಗಿ ಹೆಮ್ಮೆಯಿಂದ ಅಧಿಕಾರ ವಹಿಸಿಕೊಳ್ಳುವ ದಿನಾಂಕವಾದ ಜನವರಿ 20, 2025ರೊಳಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಮಧ್ಯಪ್ರಾಚ್ಯದಲ್ಲಿ ಮತ್ತು ಮಾನವೀಯತೆಯ ವಿರುದ್ಧ ಇಂಥ ದೌರ್ಜನ್ಯಗಳನ್ನು ಎಸಗಿದವರಿಗೆ ನರಕ ದರ್ಶನ ಮಾಡಿಸುತ್ತೇನೆ. ಅಮೆರಿಕದ ಸುದೀರ್ಘ ಮತ್ತು ಪ್ರತಿಷ್ಠೆಯ ಇತಿಹಾಸದಲ್ಲಿ ಯಾರೂ ಕಾಣಲಾರದಂಥ ದೊಡ್ಡ ಹೊಡೆತ ಬೀಳಲಿದೆ. ತಕ್ಷಣವೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ!" ಎಂದು ಹಮಾಸ್ಗೆ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ.
ಇಸ್ರೇಲಿ ಅಧಿಕಾರಿಗಳು ಹೇಳುವುದೇನು?: ಗಾಜಾದಲ್ಲಿ ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ಹಮಾಸ್ ಸುಮಾರು 250 ಒತ್ತೆಯಾಳುಗಳನ್ನು ಸೆರೆಹಿಡಿದಿದೆ. ಇದರಲ್ಲಿ ಸುಮಾರು 100 ಮಂದಿ ಈಗಲೂ ಗಾಜಾದಲ್ಲಿ ಬಂಧಿಯಾಗಿದ್ದು, ಇದರಲ್ಲಿ ಮೂರನೇ ಒಂದು ಭಾಗದಷ್ಟು ಜನ ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.
ಒತ್ತೆಯಾಳುಗಳ ಬಿಡುಗಡೆಯನ್ನು ಒಳಗೊಂಡ ಕದನ ವಿರಾಮ ಒಪ್ಪಂದ ಜಾರಿಗೆ ತರಲು ಬೈಡನ್ ಆಡಳಿತವು ಕಳೆದ ವರ್ಷದಿಂದ ಇಸ್ರೇಲ್, ಕತಾರ್ ಮತ್ತು ಈಜಿಪ್ಟ್ ಸೇರಿದಂತೆ ಅಂತಾರಾಷ್ಟ್ರೀಯ ಮಧ್ಯಸ್ಥಗಾರರೊಂದಿಗೆ ಮಾತುಕತೆ ನಡೆಸುತ್ತಿದೆ.
ಇಸ್ರೇಲ್ ಈಗಾಗಲೇ ಗಾಜಾದ ಬಹುತೇಕ ಭಾಗವನ್ನು ಧ್ವಂಸಗೊಳಿಸಿದ್ದು, ಅದರ ಸಾವಿರಾರು ಹೋರಾಟಗಾರರು ಹಾಗೂ ನಾಯಕರನ್ನು ಕೊಂದು ಹಾಕಿದೆ. ಆದರೆ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಇದರ ಹೊರತಾಗಿ ಟ್ರಂಪ್ ಏನು ಮಾಡಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಗಾಜಾದಲ್ಲಿನ ಸಂಘರ್ಷ ಮತ್ತು ಒತ್ತೆಯಾಳುಗಳ ಭವಿಷ್ಯದ ಬಗ್ಗೆ ಟ್ರಂಪ್ ಮಾತನಾಡುತ್ತಿರುವುದು ಇದೇ ಮೊದಲಲ್ಲ. ತಾನು ಶ್ವೇತ ಭವನದಲ್ಲಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಗಾಜಾದಲ್ಲಿನ ಯುದ್ಧ ಕೊನೆಗೊಳ್ಳಬೇಕೆಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಗೆ ಟ್ರಂಪ್ ತಿಳಿಸಿದ್ದಾರೆ. ಜುಲೈನಲ್ಲಿ ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ್ದ ಅವರು, ಒತ್ತೆಯಾಳುಗಳನ್ನು ಮರಳಿ ಕರೆತರುವುದು ತನ್ನ ಗುರಿಯಾಗಿದೆ ಹಾಗೂ ಇದಕ್ಕೆ ಕಾರಣರಾದವರು ಬಹಳ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದರು.
ಹಮಾಸ್ ಇತ್ತೀಚೆಗೆ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅಮೆರಿಕನ್-ಇಸ್ರೇಲಿ ಒತ್ತೆಯಾಳು ಎಡನ್ ಅಲೆಕ್ಸಾಂಡರ್ (20) ಎಂಬವರು ತನ್ನನ್ನು ಬಿಡುಗಡೆ ಮಾಡಿಸಬೇಕೆಂದು ಟ್ರಂಪ್ಗೆ ಮನವಿ ಮಾಡಿದ್ದು ಕಾಣಿಸುತ್ತದೆ. ಇದರ ನಂತರ ಈಗ ಟ್ರಂಪ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಸಿರಿಯಾ ಸಂಘರ್ಷ ಮತ್ತಷ್ಟು ಭೀಕರ: 400 ಉಗ್ರರ ಹತ್ಯೆ, ಅಸಾದ್ ಬೆಂಬಲಕ್ಕೆ ನಿಂತ ರಷ್ಯಾ