ನೆಲಮಂಗಲ: ಉತ್ತರ ಕರ್ನಾಟಕದಲ್ಲಿ ಉಂಟಾದ ನೆರೆಯಿಂದ ಜನರು ಸಂತ್ರಸ್ತರಾಗಿದ್ದಾರೆ. ಕೇಂದ್ರ ಸರ್ಕಾರ ಅವರ ಬದುಕು ಕಟ್ಟಿಕೊಳ್ಳಲು ₹ 10 ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಸಂಸದ ಬಚ್ಚೇಗೌಡ ಆಗ್ರಹಿಸಿದರು.
ತಾಲೂಕಿನ ನೂತನ ಬೂದಿಹಾಳ ಗ್ರಾಮಸೌಧ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಅಮಿತ್ ಶಾ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಸಂತ್ರಸ್ಥರನ್ನು ಭೇಟಿಯಾಗಿ ಅಭಯ ನೀಡಿದ್ದಾರೆ. ಕೂಡಲೇ ₹10 ಸಾವಿರ ಕೋಟಿ ಕೇಂದ್ರ ಬಿಡುಗಡೆ ಮಾಡಬೇಕಿದೆ ಎಂದು ಮನವಿ ಮಾಡಿದರು.
ಪ್ರವಾಹದಿಂದ ಗ್ರಾಮಗಳಿರುವ ಸುಳಿವಿಲ್ಲ. ಮತ್ತೆ ಆ ಗ್ರಾಮಗಳಂತೆ ಸರಿಪಡಿಸಲು ಐದಾರು ವರ್ಷಗಳೇ ಬೇಕು. 16 ಜಿಲ್ಲೆಗಳು ನೆರೆಹಾವಳಿಗೆ ತುತ್ತಾಗಿದ್ದು, ಹೀಗಾಗಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಎಂಟಿಬಿ ನಾಗರಾಜು ಹಾಗೂ ಅವರ ಮಗ ಬಿಜೆಪಿ ಸೇರುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈವರೆಗೂ ಆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ರಾಜ್ಯದಲ್ಲಿ ಆಗಸ್ಟ್ 16ರ ಬಳಿಕ ಸಂಪುಟ ವಿಸ್ತರಣೆ ಆಗಲಿದೆ ಎಂದ ಅವರು, ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು, ವರಿಷ್ಠರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದರು.