ಆನೇಕಲ್: ಅಕ್ಷರಜ್ಞಾನವೇ ಇಲ್ಲದ ಬಡವರ ಜಮೀನುಗಳ ದಾಖಲೆಗಳನ್ನು ಮರೆಮಾಚಿ ಭೂ ಮಾಫಿಯಾಗೆ ಬೇಕಾದಂತೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಆನೇಕಲ್ನ ಜಿಗಣಿ ನಾಡ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಆನೇಕಲ್ ತಾಲೂಕು ಹುಲಿಮಂಗಲ ಗ್ರಾಮದ ದಲಿತರಿಗೆ ಸರ್ಕಾರದಿಂದ ಭೂಮಿ ಮಂಜೂರಾಗಿತ್ತು. ಆದರೆ ಇವರು ಅನಕ್ಷರಸ್ಥರಾದ ಕಾರಣ ಹಣದ ಆಸೆ ತೋರಿಸಿ, ಇವರಿಗೆ ತಿಳಿಯದಂತೆ ನಕಲಿ ದಾಖಲೆ ಸೃಷ್ಟಿಸಿ ಇವರ ಜಮೀನುಗಳನ್ನು ಆಂಧ್ರ ಪ್ರದೇಶದ ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ.
ಪ್ರಜಾ ವಿಮೋಚನಾ ಚಳವಳಿಯ ಕಾರ್ಯಕರ್ತರು ಕಂದಾಯ ಅಧಿಕಾರಿಗಳ ವಿರುದ್ಧ ಜಿಗಣಿ ನಾಡ ಕಚೇರಿ ಮುಂಭಾಗ ಪ್ರತಿಭಟಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ನೊಂದವರಿಗೆ ನ್ಯಾಯ ಒದಗಸಿಕೊಡುವಂತೆ ಒತ್ತಾಯಿಸಿದ್ದಾರೆ.