ಹೊಸಕೋಟೆ: ಬಿಜೆಪಿ, ಜೆಡಿಎಸ್ಗೆ ವೋಟ್ ಹಾಕಿಸಿದರೆ ಸೂಸೈಡ್ ಮಾಡಿಕೊಂಡಂತೆ. ರಾಷ್ಟ್ರೀಯ ಪಕ್ಷ ಬಿಜೆಪಿಯು ಸ್ವಂತ ಬಲ ಇಲ್ಲದೆ ಬೇರೆ ಪಕ್ಷದೊಂದಿಗೆ ಮೈತ್ರಿ ಮೂಲಕ ಜೆಡಿಎಸ್ಗೆ ಮತ ಹಾಕುವಂತೆ ಹೇಳುವುದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ವಿಧಾನಪರಿಷತ್ ಚುನಾವಣೆ ಪ್ರಚಾರದಲ್ಲಿ ಅಭ್ಯರ್ಥಿ ರವಿ ಅವರ ಪರ ಡಿಕೆಶಿ ಮತಯಾಚನೆ ಮಾಡಿದರು. ಪರಿಷತ್ನಲ್ಲಿ ಜನರ ಪರ ಧ್ವನಿ ಎತ್ತಲು ರವಿಯವರನ್ನು ಗೆಲ್ಲಿಸಿ, ಹೊಸಕೋಟೆಯ ಪ್ರತಿ ಮನೆಯಲ್ಲೂ ರಾಜಕಾರಣಿಗಳಿದ್ದಾರೆ, ಇಲ್ಲಿನ ಜನತೆ ದಡ್ಡರಲ್ಲ. ನನ್ನ ಸ್ನೇಹಿತ ಎಂಟಿಬಿ ನಾಗರಾಜ್ ದಳಕ್ಕೆ ಮತ ಹಾಕಿ ಅಂತ ಹೇಳ್ತಿದ್ದಾರಂತೆ. ಬಿಜೆಪಿಗೆ ರಿಷತ್ ಚುನಾವಣೆ ಗೆಲ್ಲುವ ಧೈರ್ಯ ಇಲ್ಲ, ಈಗಾಗಲೇ ಭಯ ಆರಂಭವಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಇದ್ದರೂ ಕಾಂಗ್ರೆಸ್ ಗಾಳಿ ಬೀಸತೋಡಗಿದೆ ಎಂದು ಹೇಳಿದರು.
ಎಲ್ಲರೂ ಅಧಿಕಾರ ಇರುವ ಪಕ್ಷಕ್ಕೆ ಹೋದರೆ, ಶರತ್ ಬಚ್ಚೇಗೌಡ ಮುಂದಾಲೋಚನೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದರು. ಅವರಿಗೆ ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ, ಮಹದೇವಪುರ, ಕೆ.ಆರ್.ಪುರದಲ್ಲಿ ಕಾಂಗ್ರೆಸ್ ಧ್ವಜ ಹಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ ಎಂದರು.
ಈ ಹಿಂದೆ ವಿಧಾನಸೌಧದಲ್ಲಿ ನನ್ನ-ನಿನ್ನ ಭೇಟಿ ರಣರಂಗದಲ್ಲಿ ಅಂತ ಮಿತ್ರ ಎಂಟಿಬಿಗೆ ಸವಾಲು ಹಾಕಿದ್ದೆ. ಅದರಂತೆ ಚುನಾವಣೆ ಪ್ರಚಾರಕ್ಕೆ ಬಂದಿದ್ದೆ. ಅಲ್ಲದೆ, ಮತದಾರರು ನಾಗರಾಜ್ರನ್ನು ಸೋಲಿಸಿ ಶರತ್ ಬಚ್ಚೇಗೌಡ ಅವರನ್ನು ಗೆಲ್ಲಿಸಿ ಕಳಿಸಿದ್ದು, ಇದಕ್ಕಾಗಿ ಕ್ಷೇತ್ರದ ಜನತೆಗೆ ಧನ್ಯವಾದ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ, ಕಾಂಗ್ರೆಸ್ ಅಭ್ಯರ್ಥಿ ರವಿ ಜನರೊಂದಿಗೆ ಇದ್ದಾರೆ. ಕರ್ನಾಟಕದಲ್ಲೇ ಅತಿ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ. ಹಿಂದುಳಿದವರಿಗೆ ಪ್ರಥಮವಾಗಿ ಪಂಚಾಯಿತಿಯಲ್ಲಿ ಮೀಸಲಾತಿ, ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ತಂದಿದ್ದು ಕಾಂಗ್ರೆಸ್ ಸರ್ಕಾರವಾಗಿದೆ. ಮುಂಬರುವ ಐದು ರಾಜ್ಯಗಳ ಚುನಾವಣೆಯಲ್ಲಿ ಸೋಲಿನ ಮನವರಿಕೆಯಾಗಿ ಪ್ರಧಾನಿ ಮೋದಿಯವರು ಯಾರೊಂದಿಗೂ ಚರ್ಚಿಸದೆ ಏಕಪಕ್ಷಿಯವಾಗಿ ರೈತ ವಿರೋಧಿ ಕಾನೂನು ಹಿಂದೆ ತೆಗೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಪರಿಷತ್ ಚುನಾವಣೆ ಕಣಕ್ಕಿಳಿಯದ ಕಾಂಗ್ರೆಸ್ ಹಾಲಿ ಸದಸ್ಯರ ಮುಂದಿನ ಭವಿಷ್ಯವೇನು?!