ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಮನೆಯ ಮುಂಭಾಗದಲ್ಲಿ ಕಟ್ಟಿಹಾಕಿದ್ದ ಎರಡು ಗರ್ಭ ಧರಿಸಿದ್ದ ಹಸುಗಳು ಸೇರಿದಂತೆ ಒಂದು ಗಂಡು ಕರುವನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಗರದ ಕೊಂಗಾಡಿಯಪ್ಪ ಕಾಲೇಜ್ ಬಳಿಯ ವಿದ್ಯಾನಗರದಲ್ಲಿ ನಡೆದಿದೆ. ಕಳ್ಳರು ಹಸುಗಳನ್ನು ಕದ್ದೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಮೇಶ್ ಎಂಬುವವರಿಗೆ ಸೇರಿದ ಒಂದು ಗರ್ಭ ಧರಿಸಿದ್ದ ಹಸು ಮತ್ತು ಒಂದು ಕರುವನ್ನು ಕಳ್ಳರು ಕದ್ದೊಯ್ದಿದ್ದಾರೆ. ಇವರ ಮನೆಯ ಪಕ್ಕದ ಹನುಮಂತ ಎಂಬುವವರ ಒಂದು ಗರ್ಭಿಣಿ ಹಸುವನ್ನೂ ಕಳ್ಳರು ಕದ್ದಿದ್ದಾರೆ. ಆಗಸ್ಟ್ 19 ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಅಂದು ರಾತ್ರಿ 8 ಮತ್ತು 10 ಗಂಟೆಗೆ ರಮೇಶ್ ಹಸುಗಳಿಗೆ ಮೇವು ಹಾಕಿ ಮಲಗಿದ್ದರು. ಅದೇ ದಿನ ಮಧ್ಯರಾತ್ರಿ ಮನೆಯ ಬಳಿ ಗಲಾಟೆಯಾಗುತ್ತಿತ್ತು. ಆಗ ಗಾಂಜಾ ಹುಡುಗರ ಗಲಾಟೆ ಎಂದು ಸುಮ್ಮನೆ ಮಲಗಿದ್ದಾರೆ.
ಬೆಳಗ್ಗೆ ಹಾಲು ಕರೆಯಲು ಹೋದಾಗ 8 ಹಸುಗಳಲ್ಲಿ ಮೂರು ಹಸುಗಳು ನಾಪತ್ತೆಯಾಗಿರುವುದು ಕಂಡುಬಂದಿದೆ. ಮಧ್ಯರಾತ್ರಿ ಬಂದಿರುವ ಕಳ್ಳರು ಮನೆಯ ಮುಂಭಾಗದಲ್ಲಿ ಕಟ್ಟಲಾಗಿದ್ದ ಎರಡು ಗರ್ಭಿಣಿ ಮತ್ತು ಒಂದು ಕರುವನ್ನು ಕದ್ದೊಯ್ದಿದ್ದಾರೆ. ಆಗಸ್ಟ್ 8 ರಂದು ಸಹ ಇದೇ ಏರಿಯಾದಲ್ಲಿ ಹಸುಗಳ ಕಳ್ಳತನವಾಗಿತ್ತು.
ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ವೃದ್ಧೆ ಸಾಕಿದ್ದ 10ಕ್ಕೂ ಹೆಚ್ಚು ಜಾನುವಾರುಗಳ ಕಳ್ಳತನ: ಬೀದಿಗೆ ಬಿದ್ದ ಹಿರಿಯ ಜೀವ