ಆನೇಕಲ್: ಜಿಗಣಿ ಪುರಸಭೆ ಹಾಗೂ ಪೊಲೀಸ್ ಇಲಾಖೆ, ಸಾರ್ವಜನಿಕರ ಸಹಕಾರದಿಂದ ನಿರ್ಮಾಣಗೊಂಡ ಕೋವಿಡ್ ಕೇರ್ ಸೆಂಟರ್ಗೆ ಎಎಸ್ಪಿ ಲಕ್ಷ್ಮಿಗಣೇಶ್ ಹಾಗೂ ಶಾಸಕ ಎಂ.ಕೃಷ್ಣಪ್ಪ ಚಾಲನೆ ನೀಡಿದರು.
ಕಾರ್ಖಾನೆಗಳು, ಬೊಮ್ಮಸಂದ್ರ-ಜಿಗಣಿ ಕೈಗಾರಿಕಾ ಪ್ರದೇಶಗಳು ಇರುವುದರಿಂದ ವಲಸೆ ಕೂಲಿ ಕಾರ್ಮಿಕರ ಸಂಚಾರ ಹೆಚ್ಚಾಗಿದ್ದು, ಸಹಜವಾಗಿಯೇ ಕೊರೊನಾ ಸೋಂಕು ಹರಡಲು ಕಾರಣವಾಗಿದೆ. ಇದಕ್ಕೆ ಪ್ರತಿಯಾಗಿ ಖಾಸಗಿ ಆಸ್ಪತ್ರೆಗಳು ಸುಲುಗೆಗೆ ನಿಂತಿವೆ. ಇದರಿಂದ ಶುಲ್ಕ ಕಟ್ಟಲು ಸೋಂಕಿತರು ಪರದಾಡುವ ಸ್ಥಿತಿ ಉಂಟಾಗಿತ್ತು.
ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ ಖಾಸಗೀ ಕಾರ್ಖಾನೆಗಳ ಸಹಕಾರದಿಂದ ಜಿಗಣಿ ಇನ್ಸ್ಪೆಕ್ಟರ್ ಕೆ.ವಿಶ್ವನಾಥ್, ರಾಮಕೃಷ್ಣಾಶ್ರಮದ ಆಶ್ರಯದಲ್ಲಿ ನಿತ್ಯ ಆಹಾರ ಪೊಟ್ಟಣ, ದಿನಸಿ ಹಾಗೂ ವಸತಿ ಸೇರಿದಂತೆ ಅತ್ಯಗತ್ಯ ಮೂಲಭೂತ ಸೌಲಭ್ಯಗಳನ್ನು ನಿರಾಶ್ರಿತರಿಗೆ ಒದಗಿಸಿದ್ದರು.
ಈಗ ಸೋಂಕು ಗಣನೀಯವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆ ಖಾಸಗೀ ಆಸ್ಪತ್ರೆಗಳ ಹಾವಳಿ ತಪ್ಪಿಸಲು, ಜಿಗಣಿಯ ಸಮಾಜ ಕಲ್ಯಾಣ ಇಲಾಖಾ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ 50 ಹಾಸಿಗೆಗಳ ಸುಸಜ್ಜಿತ ವ್ಯವಸ್ಥೆಯನ್ನು ಒದಗಿಸಿ, ಬಡ ಸೋಂಕಿತರಿಗಾಗಿ ಲೋಕಾರ್ಪಣೆ ಮಾಡಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಅಮರನಾಥ್, ಡಿವೈಎಸ್ಪಿ ನಂಜುಂಡೇಗೌಡ, ಜಿಗಣಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಲತಾ, ಎನಬಲ್ ಇಂಡಿಯಾ ಚೇತನ್, ಪುರಸಭಾ ನಾಮನಿರ್ದೇಶಿತ ಸದಸ್ಯ ಗಿರೀಶ್, ಪ್ರವೀಣ್, ಮತ್ತಿತರ ಸ್ವಯಂ ಸೇವಕರಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಂಡು, ಸೇವೆ ಸಲ್ಲಿಸಿದ್ದಾರೆ.