ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ, 48 ಗಂಟೆಗಳ ಕಾಲ ಜಿಲ್ಲಾಡಳಿತ ಭವನದಲ್ಲಿನ ಎಲ್ಲಾ ಕಚೇರಿಗಳನ್ನ ಸೀಲ್ಡೌನ್ ಮಾಡಲಾಗಿದೆ.
![Corona positive for Bangalore Rural District Collector.](https://etvbharatimages.akamaized.net/etvbharat/prod-images/kn-bng-05-sealdown-av-7208821_02072020215322_0207f_1593707002_672.jpg)
ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದಲ್ಲಿನ ಜಿಲ್ಲಾಡಳಿತ ಭವನಕ್ಕೆ ಜುಲೈ 2 ರಿಂದ 48 ಗಂಟೆಗಳ ಕಾಲ ಸೀಲ್ಡೌನ್ ಮಾಡಲು ಅಪರ ಜಿಲ್ಲಾಧಿಕಾರಿ ಜಗದೀಶ್ ನಾಯಕ್ ಆದೇಶ ಹೊರಡಿಸಿದ್ದಾರೆ. ಜಿಲ್ಲಾಡಳಿತದ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಕಚೇರಿಗಳ ಒಳಾಂಗಣ ಮತ್ತು ಹೊರಾಂಗಣವನ್ನ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಬಾರದಂತೆ ಆದೇಶ ನೀಡಲಾಗಿದ್ದು, ತುರ್ತು ಸಮಯದಲ್ಲಿ ಮನೆಯಿಂದ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.