ಆನೇಕಲ್ : ದೊಮ್ಮಸಂದ್ರ- ವರ್ತೂರು ಮುಖ್ಯರಸ್ತೆಯಲ್ಲಿನ ದ ಇಂಟರ್ನ್ಯಾಷನಲ್ ಸ್ಕೂಲ್ ಬೆಂಗಳೂರು ಎಂಬ ರೆಸಿಡೆನ್ಷಿಯಲ್ ಶಾಲೆಯಲ್ಲಿ 34 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆನೇಕಲ್ ತಾಲೂಕು ಆರೋಗ್ಯಾಧಿಕಾರಿ ವಿನಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಒಟ್ಟು 497 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಓರ್ವ ಶಾಲಾಡಳಿತ ಸಿಬ್ಬಂದಿ ಸೇರಿದಂತೆ 33 ಮಂದಿ ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಪ್ರಕಟಣೆಯಲ್ಲಿ ಟಿಹೆಚ್ಒ ಅಧಿಕಾರಿ ತಿಳಿಸಿದ್ದಾರೆ.
ಒಬ್ಬ ವಿದ್ಯಾರ್ಥಿ ವಿಕ್ರಮ್ ಆಸ್ಪತ್ರೆಯಲ್ಲಿ ದಾಖಲಾದರೆ 4ಮಂದಿ ಬೆಂಗಳೂರಿನ ಮನೆಯಲ್ಲಿಯೇ ಐಸೋಲೇಷನ್ನಲ್ಲಿದ್ದಾರೆ. 6 ಮಂದಿ ಹೊರ ರಾಜ್ಯದಲ್ಲಿ ಹೋಂ ಐಸೋಲೇಷನ್ ನಲ್ಲಿದ್ದಾರೆ. ಉಳಿದ 22 ಮಂದಿ ಶಾಲಾ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇನ್ನೂ 67 ಮಂದಿಯ ಸೋಂಕು ಮಾದರಿ ಪರೀಕ್ಷೆಯ ಫಲಿತಾಂಶ ಹೊರಬೀಳಬೇಕಿದೆ.
ಹಾಗೆಯೇ ಅನೇಕಲ್- ಚಂದಾಪುರ ಮುಖ್ಯರಸ್ತೆಯ ಮರಸೂರು ಗೃಟ್ ಬಳಿಯ ಸ್ಪೂರ್ತಿ ನರ್ಸಿಂಗ್ ಕಾಲೇಜಿನ ಹಾಸ್ಟೆಲ್ ಲ್ಲಿ ಒಟ್ಟು 158 ವಿದ್ಯಾರ್ಥಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, 12 ಮಂದಿಗೆ ಸೋಂಕು ದೃಢಪಟ್ಟಿದೆ. 9 ಮಂದಿ ವಿದ್ಯಾರ್ಥಿಗಳನ್ನು ಜಿಗಣಿ ಕೊರೊನಾ ನಿಯಂತ್ರಣ ಕೇಂದ್ರದಲ್ಲಿ ದಾಖಲಿಸಿದ್ದು, 3 ಮಂದಿ ಇತರೆ ಹೊರ ರಾಜ್ಯಗಳ ಅವರವರ ಮನೆಗಳಲ್ಲಿ ಐಸೋಲೇಷನ್ನಲ್ಲಿದ್ದಾರೆ. ಉಳಿದ 106 ಕೊರೊನಾ ಸೋಂಕಿನ ಪರೀಕ್ಷೆಯ ಫಲಿತಾಂಶ ಹೊರಬೀಳಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ವಿನಯ್ ತಿಳಿಸಿದ್ದಾರೆ.