ಆನೇಕಲ್: ತಡರಾತ್ರಿ ಜಿಗಣಿ ಪಟ್ಟಣದಲ್ಲಿನ ಎರಡು ಎಟಿಎಂ ಕೇಂದ್ರಗಳಲ್ಲಿ ಹಣ ಕದಿಯಲು ಮುಂದಾಗಿದ್ದ ಖದೀಮನೋರ್ವನನ್ನು ಎಟಿಎಂ ಒಳಗಡೆಯೇ ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.
ತಡರಾತ್ರಿ ಜಿಗಣಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಹೆಚ್ಡಿಎಫ್ಸಿ ಹಾಗೂ ಕರ್ನಾಟಕ ಬ್ಯಾಂಕ್ ಎಟಿಎಂ ಕೇಂದ್ರಗಳಿಗೆ ನುಗ್ಗಿದ ಬಿಹಾರ ಮೂಲದ ಆರೋಪಿ ಅಮಿತ್ ಕುಮಾರ್ (30), ಹಣ ದೋಚಲು ಮುಂದಾಗಿದ್ದಾನೆ. ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗುತ್ತಿದ್ದರೂ ಸಹ ಕುಡಿದ ಮತ್ತಿನಲ್ಲಿದ್ದ ಆತ ಎಟಿಎಂ ಯಂತ್ರವನ್ನು ಒಡೆದು ಹಣ ದೋಚಲು ಯತ್ನಿಸಿದ್ದಾನೆ. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಈತನನ್ನು ಗಮನಿಸಿದ್ದು, ಎಟಿಎಂ ಕೇಂದ್ರದತ್ತ ಧಾವಿಸಿದಾಗ ಖುದ್ದು ಪೊಲೀಸರ ಕೈಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಆರೋಪಿ ಅಮಿತ್ ಕುಮಾರ್ ಜಿಗಣಿ ರಾಧಾಮಣಿ ಗಾರ್ಮೆಂಟ್ಸ್ ಮುಂಭಾಗದ ಪ್ಯಾಕರ್ಸ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಜಿಗಣಿ ಕೈಗಾರಿಕಾ ಪ್ರದೇಶವಾಗಿರುವುದರಿಂದ ಸಂಬಳ ಪಡೆಯುವ ಕಾರ್ಮಿಕರಿಗಾಗಿ ಎರಡೂ ಎಟಿಎಂಗಳಲ್ಲಿ ಹಣ ಹೆಚ್ಚಾಗಿ ಇರುವುದನ್ನು ಗಮನಿಸಿದ್ದ ಆರೋಪಿ ಅಮಿತ್, ಈ ಎರಡು ಎಟಿಎಂಗಳಲ್ಲಿ ಹಣ ದೋಚಲು ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ.