ದೊಡ್ಡಬಳ್ಳಾಪುರ: ಯಲಹಂಕ - ಹಿಂದೂಪುರದ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಈ ಟೋಲ್ ರಸ್ತೆಯು ಹಳ್ಳಗುಂಡಿಗಳಿಂದ ಕೂಡಿದ್ದು ರಸ್ತೆ ಅಪಘಾತಗಳು ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಟೋಲ್ ರಸ್ತೆಯನ್ನು ದುರಸ್ಥಿಗೊಳಿಸಿದ ನಂತರವೇ ಟೋಲ್ ಸುಂಕ ಸಂಗ್ರಹಿಸಿ ಎಂದು ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟಿಸಿದರು.
ದೊಡ್ಡಬಳ್ಳಾಪುರ ಗಡಿಭಾಗದ ಮಾರಸಂದ್ರ ಬಳಿ ಯಲಹಂಕ- ಹಿಂದೂಪುರ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಈ ಹೆದ್ದಾರಿಯನ್ನು ಯಲಹಂಕ ಎಪಿ ಬಾರ್ಡರ್ ಟೋಲ್ ವೆಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಮಾರಸಂದ್ರ ಮತ್ತು ಗುಂಜೂರು ಬಳಿ ಟೋಲ್ ಗೇಟ್ ನಿರ್ಮಾಣ ಮಾಡಲಾಗಿದ್ದು, ಈ ಮೂಲಕ ವಾಹನ ಸವಾರರಿಂದ ಟೋಲ್ ಸುಂಕ ಸಂಗ್ರಹಿಸಲಾಗುತ್ತಿದೆ.
ಆದರೆ, ಟೋಲ್ ರಸ್ತೆಯಲ್ಲಿ ಹಳ್ಳ ಗುಂಡಿಗಳಿರುವುದರಿಂದ ರಸ್ತೆ ದುರಸ್ಥಿ ಮಾಡುವವರೆಗೂ ಟೋಲ್ ಫ್ರೀ ಮಾಡಬೇಕು. ಇದರ ಜೊತೆಗೆ, ಹೆದ್ದಾರಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕೆಂದು ಕನ್ನಡಪರ ಸಂಘಟನೆಯ ಕಾರ್ಯಕರ್ತರು ಇದೇ ವೇಳೆ ಒತ್ತಾಯಿಸಿದರು.
ಟೋಲ್ ಫ್ಲಾಜಾ ಬಳಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಪ್ರಥಮ ಚಿಕಿತ್ಸೆ ನೀಡುವ ಕೊಠಡಿಯನ್ನು ಗೋದಾಮು ಮಾಡಿಕೊಂಡಿದ್ದಾರೆ. ಪೊಲೀಸ್ ಚೌಕಿಯನ್ನು ಸಿಬ್ಬಂದಿಗಳ ವಿಶ್ರಾಂತಿ ಕೊಠಡಿ ಮಾಡಿಕೊಂಡಿರುವುದು ಟೋಲ್ ಗೇಟ್‌ನ ಅವ್ಯವಸ್ಥೆಯನ್ನು ತೋರ್ಪಡಿಸುತ್ತದೆ ಎಂದು ಪ್ರತಿಭಟನಕಾರರು ದೂರಿದ್ದಾರೆ.
ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಟೋಲ್ ಗೇಟ್ ಮ್ಯಾನೇಜರ್ ರವಿಬಾಬು, 'ನಮಗೆ ಗೊತ್ತಿಲ್ಲದಂತೆ ಅನಧಿಕೃತವಾಗಿ ಬೆಸ್ಕಾಂ ಸೇರಿದಂತೆ ಹಲವು ಇಲಾಖೆಗಳು ಕಾಮಗಾರಿ ಕಾರಣಕ್ಕೆ ರಸ್ತೆ ಅಗೆದು ಹಾಗೆಯೇ ಬಿಡುತ್ತಾರೆ. ಹಾಗಾಗಿ ಟೋಲ್ ರಸ್ತೆಯಲ್ಲಿ ಹಳ್ಳ ಗುಂಡಿಗಳು ನಿರ್ಮಾಣವಾಗಿವೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿದೆ' ಎಂದರು.
ಇದನ್ನೂ ಓದಿ : ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ಸಾವು : ಸಬ್ ಇನ್ಸ್ಪೆಕ್ಟರ್ ಕೊಂದು, ವಾಹನಕ್ಕೆ ಬೆಂಕಿ ಹಚ್ಚಿದ್ರು!