ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ತನ್ನ ಶರ್ಟ್ ತೆಗೆಯುವಂತೆ ಒತ್ತಾಯಿಸಿದ್ದರೆಂದು ಪ್ರಯಾಣಿಕರೊಬ್ಬರು ಆರೋಪ ಮಾಡಿದ್ದರು. ಈ ಆರೋಪ ಸುಳ್ಳೆಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಮೂಲಗಳು ತಿಳಿಸಿವೆ. ಅಲ್ಲದೇ ಆರೋಪ ಮಾಡಿದ ಮಹಿಳೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಘಟನೆ ನಡೆದಿದ್ದು, ಕೃಷಾನಿ ಗಾಧ್ವಿ ಎಂಬ ಮಹಿಳೆ ಭದ್ರತಾ ತಪಾಸಣೆಯ ವೇಳೆ ಶರ್ಟ್ ತೆಗೆಯುವಂತೆ ಒತ್ತಾಯಿಸಿದ್ದಾಗಿ ಆರೋಪ ಮಾಡಿದ್ದರು. ಅಲ್ಲದೇ ಈ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟ್ವಿಟರ್ ಖಾತೆಗೆ ಟ್ಯಾಗ್ ಸಹ ಮಾಡಿದ್ದರು.
'ಭದ್ರತಾ ತಪಾಸಣೆ ವೇಳೆ ತನಗೆ ಶರ್ಟ್ ತೆಗೆಯುವಂತೆ ಸೂಚಿಸಿದ್ದರು. ಸಿಬ್ಬಂದಿಯ ವರ್ತನೆಯಿಂದ ನನಗೆ ಬಹಳ ಮುಜುಗರ ಹಾಗೂ ಅವಮಾನವಾಗಿದೆ. ಭದ್ರತಾ ತಪಾಸಣೆ ಕೇಂದ್ರದಲ್ಲಿ ನಿಂತು ಮಹಿಳೆಯರಿಗೆ ಕಿರಿಕಿರಿ ಉಂಟು ಮಾಡುವ ವರ್ತನೆಗಳನ್ನ ಎದುರಿಸುವುದು ಅವಮಾನಕರ ಸಂಗತಿಯಾಗಿದೆ. ಭದ್ರತಾ ತಪಾಸಣೆ ವೇಳೆ ಮಹಿಳೆಯರು ಏಕೆ ಶರ್ಟ್ ತೆಗೆಯಬೇಕು ಎಂದು ಹೇಳಿದ್ದರು' ಟ್ವಿಟರ್ನಲ್ಲಿ ಭದ್ರತಾ ತಪಾಸಣೆ ನಡೆಸುವ ಸಿಬ್ಬಂದಿ ವಿರುದ್ಧ ಅವರು ಆರೋಪ ಮಾಡಿದ್ದರು. ಆದರೆ, ಕೃಷಾನಿ ಗಾಧ್ವಿ ಮಾಡಿರುವ ಆರೋಪ ಸುಳ್ಳೆಂದು ಇದೀಗ CISF ಮೂಲಗಳು ಸ್ಪಷ್ಟಪಡಿಸಿವೆ.
'ಕೃಷಾನಿ ಗಾಧ್ವಿ ಬ್ಯಾಡ್ಜ್ ಮತ್ತು ಮಣಿಗಳನ್ನು ಹೊಂದಿರುವ ಡೆನಿಮ್ ಜಾಕೆಟ್ ಧರಿಸಿದ್ದರು. CISF ಮಹಿಳಾ ಸಿಬ್ಬಂದಿ ಜಾಕೆಟ್ ಅನ್ನು ಸ್ಕ್ಯಾನರ್ನಲ್ಲಿ ಹಾಕುವ ಕಾರಣಕ್ಕೆ ಅವರನ್ನು ಪರದೆಯೊಳಗೆ ಕಳಿಸಿದ್ದಾರೆ. ಜಾಕೆಟ್ ತೆಗೆದುಕೊಳ್ಳಲು ಅವರು ಖುಷಿಯಿಂದ ಪರದೆಯಿಂದ ಹೊರಗೆ ಬಂದಿದ್ದಾರೆ. ಆದರೆ, ಜಾಕೆಟ್ ತೆಗೆಯುವಂತೆ ಹೇಳಿದ್ದು, ಅವರಿಗೆ ಅಸಮಾಧಾನ ಉಂಟು ಮಾಡಿದೆ. ಈ ಕುರಿತಂತೆ ಆರೋಪ ಮಾಡಿದ ಕೃಷಾನಿ ಗಾಧ್ವಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ಸಹ ನೀಡಿಲ್ಲ. ಅವರ ಟ್ವಿಟರ್ ಖಾತೆ ಡಿಲಿಟ್ ಆಗಿರುವುದು ಸಹ ಅನುಮಾನಕ್ಕೆ ಕಾರಣವಾಗಿದೆ. ಹಾಗಾಗಿ CISF ವಿರುದ್ಧ ಸುಳ್ಳು ಆರೋಪ ಮಾಡಿದ ಮಹಿಳೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ' CISF ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಆರೇ ಗಂಟೆಯಲ್ಲಿ 18 ಲಕ್ಷ ಕಳೆದುಕೊಂಡ ಸಾಫ್ಟ್ವೇರ್ ಇಂಜಿನಿಯರ್..ಯುವತಿಗೆ ವಂಚನೆ ಮಾಡಿದ ಸೈಬರ್ ಅಪರಾಧಿಗಳು!