ಆನೇಕಲ್ : ಇತ್ತೀಚೆಗೆ ಗ್ರಾಮಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ಚಿರತೆ ಓಡಾಟದ ಘಟನೆ ಸದ್ದು ಮಾಡಿತ್ತು. ಅದರಂತೆ ಚಿರತೆಯನ್ನು ಹಿಡಿದು ಅರಣ್ಯಾಧಿಕಾರಿಗಳು ಕ್ರಮ ವಹಿಸಿದ್ದರು. ಇದೀಗ ಇದನ್ನೇ ನೆಪವಿಟ್ಟು ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ಪುಂಡರ ಗುಂಪೊಂದು ದೂರದಿಂದ ಬೆಕ್ಕಿನ ದೃಶ್ಯ ಸೆರೆಹಿಡಿದು ಆ ಫೋಟೋವನ್ನು ಎಡಿಟ್ ಮಾಡಿ, ಗ್ರಾಮದಲ್ಲಿ ಚಿರತೆ ಸಂಚಾರ ಎಂದು ವದಂತಿಯನ್ನು ಹಬ್ಬಿಸಿ, ವಾಟ್ಸಪ್ ಗುಂಪುಗಳಿಗೆ ಹರಿಬಿಡುತ್ತಿರುವುದು ಅರಣ್ಯಾಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
ಮೊನ್ನೆಯಷ್ಟೇ ಮುತ್ತಾನಲ್ಲೂರು ಗೋಪಸಂದ್ರಕ್ಕೆ ಬೆಕ್ಕೊಂದು ಬಂದ ದೃಶ್ಯವನ್ನು ದೂರದಿಂದ ಸೆರೆ ಹಿಡಿದು ಜಾಲತಾಣದಲ್ಲಿ ಹರಿಬಿಟ್ಟಿದ್ದರಿಂದ ವಿಡಿಯೋ ವೈರಲ್ ಆಗಿತ್ತು. ಹೀಗಾಗಿ ಅರಣ್ಯಾಧಿಕಾರಿಗಳು ಪಟಾಕಿ ಸಿಡಿಸಿ, ಇಡೀ ರಾತ್ರಿ ಗ್ರಾಮದ ಸುತ್ತ ಕಾವಲು ಕಾದಿದ್ದರು. ಅನಂತ ಹುಸ್ಕೂರು ಬಳಿಯ ಚಿಂತಲಮಡಿವಾಳದಲ್ಲಿ ನಾಯಿ ಹೆಜ್ಜೆ ಗುರುತುಗಳನ್ನು ಜಾಲತಾಣದಲ್ಲಿ ಹರಿಬಿಟ್ಟು, ಚಿರತೆ ಪ್ರತ್ಯಕ್ಷ ಎಂದು ಗುಲ್ಲೆಬ್ಬಿಸಲಾಗಿತ್ತು.
ಇದೀಗ ಹೀಲಲಿಗೆ ಗ್ರಾಮದಲ್ಲಿ ರಾತ್ರಿ ಮನೆಯೊಂದರ ಪಕ್ಕ ಫೋಟೋ ಎಡಿಟ್ ಮಾಡಿ ಚಿರತೆ ಪ್ರತ್ಯಕ್ಷ ಎಂದು ಫೇಸ್ಬುಕ್ ಪೇಜ್ನಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅರಣ್ಯಾಧಿಕಾರಿಗಳ ತಂಡ ರಾತ್ರಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರನ್ನು ವಿಚಾರಿಸಿದ್ದರು. ಹೀಗಾಗಿ ಚಿರತೆ ಬಗ್ಗೆ ವದಂತಿ ಹಬ್ಬಿಸುತ್ತಿರುವ ಕುರಿತು ಮಾಹಿತಿ ಹೊರಬಿದ್ದಿದೆ.
ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ (ಪ್ರತ್ಯೇಕ ಘಟನೆ) : ಕಳೆದ ಕೆಲ ದಿನಗಳಿಂದ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು. ಅರಳುಮಲ್ಲಿಗೆ-ಕುಂಟನಹಳ್ಳಿ ಮಾರ್ಗಮಧ್ಯೆ ಚಿರತೆ ವಾಹನ ಸವಾರರ ಕಣ್ಣಿಗೆ ಬಿದ್ದಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಕಾಡುಪ್ರಾಣಿಯ ದರ್ಶನವಾಗಿತ್ತು. ಮೊಬೈಲ್ನಲ್ಲಿ ಓಡಾಟದ ವಿಡಿಯೋವನ್ನು ಅವರು (ಜನವರಿ-2-24) ಸೆರೆಹಿಡಿದಿದ್ದರು.
ದೊಡ್ಡಬಳ್ಳಾಪುರದ ಅಪೆರಲ್ ಪಾರ್ಕ್, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ, ವೀರಾಪುರದಲ್ಲಿ ಕಾಣಿಸಿಕೊಂಡ ಚಿರತೆ ಮತ್ತು ಕುಂಟನಹಳ್ಳಿಯಲ್ಲಿ ಕಾಣಿಸಿಕೊಂಡ ಚಿರತೆ ಒಂದೇ ಎಂದು ಅರಣ್ಯಾಧಿಕಾರಿಗಳಿಂದ ತಿಳಿದು ಬಂದಿತ್ತು.
ಇದೇ ರೀತಿ, ಕಳೆದ ಡಿಸೆಂಬರ್ನಲ್ಲಿ ಚಾಲಕನಿಗೆ ಚಿರತೆ ಎದುರಾಗಿತ್ತು. ಆನೇಕಲ್ ತಾಲೂಕಿನ ಹುಸ್ಕೂರು ಮದ್ದೂರಮ್ಮ ದೇವಾಲಯದ ಹಿಂಬದಿ ರಸ್ತೆಯಲ್ಲಿ ನಸುಕಿನ ಜಾವ ತೆರಳುತ್ತಿದ್ದಾಗ ಗೋಚರಿಸಿತ್ತು. ಕೂಡಲೇ ಚಾಲಕ ಮೊಬೈಲ್ನಲ್ಲಿ ಚಿರತೆಯ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಾಕಷ್ಟು ವೈರಲ್ ಆಗಿತ್ತು. ಇದಕ್ಕೂ ಮುನ್ನ, ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ತೋಟದ ಸಮೀಪವೂ ಚಿರತೆ ಹೊಂಚು ಹಾಕಿ ಕಾದು ಕುಳಿತು ನಾಯಿ ಮರಿಯನ್ನು ಹೊತ್ತೊಯ್ದಿತ್ತು.
ಇದನ್ನೂ ಓದಿ : ದೊಡ್ಡಬಳ್ಳಾಪುರ: ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ- ವಿಡಿಯೋ