ದೊಡ್ಡಬಳ್ಳಾಪುರ: ಫೇಸ್ಬುಕ್ ಮೂಲಕ ಪರಿಚಯವಾದ ವ್ಯಕ್ತಿಯ ಸಹಾಯದಿಂದ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ದುಬಾರಿ ಬೆಲೆಯ ಕಾರುಗಳ ಕಳ್ಳತನ ಮಾಡಿಸಿ, ನಕಲಿ ದಾಖಲೆ ಸೃಷ್ಠಿಸಿ ಕರ್ನಾಟಕದಲ್ಲಿ ಮಾರಾಟ ಮಾಡಲಾಗುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ.
50 ಲಕ್ಷ ರೂ.ಗೂ ಹೆಚ್ಚಿನ ಬೆಲೆ ಬಾಳುವ ಕಾರುಗಳನ್ನು ಆರೋಪಿಗಳು ಕಳ್ಳತನ ಮಾಡಿದ್ದರು.
ಏ.17 ರ ಸಂಜೆ 7ಗಂಟೆಗೆ ನಗರದ ರೈಲ್ವೆ ನಿಲ್ದಾಣದ ಬಳಿ ಬೀಟ್ನಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ಗಳಾದ ಪಾಂಡುರಂಗ ಮತ್ತು ಕುಮಾರ್ ಬ್ರೇಝಾ ಕಾರು ನಿಲ್ಲಿಸಿದ್ದಾರೆ. ಈ ವೇಳೆ ದಾಖಲೆ ಪರಿಶೀಲಿಸಿದಾಗ ದಾಖಲೆಗಳು ಇಲ್ಲದೆ ಇರುವುದು ಬೆಳಕಿಗೆ ಬಂದಿದೆ. ಈ ವೇಳೆ ಕಾರಿನಲ್ಲಿದ್ದ ತೋಗರಿಘಟ್ಟ ಗ್ರಾಮದ ಸುರೇಶ್ (28), ಸುಣ್ಣಘಟ್ಟ ಗ್ರಾಮದ ಲೋಕೇಶ್(28) ಚನ್ನಾಪುರ ಗ್ರಾಮದ ರೇಣುಕಾ ಪ್ರಸಾದ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಫೇಸ್ಬುಕ್ ಮೂಲಕ ಪರಿಚಯವಾದ ದೆಹಲಿ ಮೂಲದವರನ್ನು ಕಳ್ಳತನಕ್ಕೆ ಬಳಸಿಕೊಳ್ಳುತ್ತಿದ್ದಾರಂತೆ. ಬಳಿಕ ಕಾರನ್ನು ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ಹಲವು ಕಡೆ ಮಾರಾಟ ಮಾಡುತ್ತಿದ್ದರು. ಈ ಬಳಿಕ ತನಿಖೆ ಕೈಗೊಂಡ ಪೊಲೀಸರು ಪ್ರಮುಖ ಆರೋಪಿಗಳಾದ ಮಾರಸಂದ್ರದ ಶ್ರೀನಿವಾಸ ಅಲಿಯಾಸ್ ಲಗ್ಗೆರೆ ಸೀನ (31) ಎನ್ನುವವನನ್ನು ಬಂಧಿಸಿದ್ದು, ಈತನಿಗೆ ನಕಲಿ ದಾಖಲೆ ತಯಾರಿಸಲು ನೆರವು ನೀಡಿದ ಆರ್ಟಿಒ ಕಚೇರಿಯಲ್ಲಿ ಏಜೆಂಟ್ ಕೆಲಸ ಮಾಡುತ್ತಿದ್ದ ಸಿದ್ದೇನಾಯಕನಹಳ್ಳಿಯ ರೌಡಿ ಶೀಟರ್ ಹೇಮಂತ ಕುಮಾರ್ (36) ಬಂಧಿಸಲಾಗಿದೆ.
ಈ ಆರೋಪಿಗಳು ದೆಹಲಿ ಮೂಲದ ವ್ಯಕ್ತಿಯನ್ನು ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು ಆತನ ಮೂಲಕ ಐಷಾರಾಮಿ ಕಾರುಗಳ ಕಳವು ಮಾಡಿಸಿದ್ದಾರೆ. ಬಳಿಕ ಕರ್ನಾಟಕಕ್ಕೆ ತಂದು ಆರ್ಟಿಒ ಕಚೇರಿಯಲ್ಲಿ ಏಜೆಂಟ್ ಕೆಲಸ ಮಾಡುತ್ತಿದ್ದ ಸಿದ್ದೇನಾಯಕನಹಳ್ಳಿಯ ರೌಡಿ ಶೀಟರ್ ಹೇಮಂತ್ ಕುಮಾರ್ ಮೂಲಕ ಆರ್ಸಿ ಕಾರ್ಡ್ಗಳನ್ನು ತರಿಸಿ, ಕಳ್ಳತನ ಮಾಡಿ ತಂದಿದ್ದ ಕಾರುಗಳ ಇಂಜಿನ್ ನಂಬರ್ ಹಾಗೂ ಚಾರ್ಸಿ ನಂಬರ್ ಹಾಕಿ, ನಂತರ ಓಎಲ್ಎಕ್ಸ್ ಮೂಲಕ ಇದೇ ಮಾಡಲ್ ಕಾರುಗಳನ್ನು ಸರ್ಚ್ ಮಾಡಿದ್ದಾರೆ. ಬಳಿಕ ಅದರ ನೋಂದಣಿ ಸಂಖ್ಯೆಯನ್ನು ಆರ್ಟಿಒ ಕಚೇರಿಯಿಂದ ಕಳವು ಮಾಡಿ, ಆರ್ಸಿ ಸ್ಮಾರ್ಟ್ ಕಾರ್ಡ್ ತಯಾರಿಸಿ ಕೆಲವು ಕಾರುಗಳನ್ನು ಮಾರಾಟ ಮಾಡಿ, ಮತ್ತೆ ಕೆಲವನ್ನು ಅಡವಿಟ್ಟಿದ್ದಾರೆ.
ಆರೋಪಿಗಳಿಂದ ಉತ್ತರ ಪ್ರದೇಶ, ದೆಹಲಿ ಅಕ್ಕಪಕ್ಕದ ರಾಜ್ಯಗಳಿಂದ ಸುಮಾರು 50 ಲಕ್ಷ ಬೆಲೆ ಬಾಳುವ 4 ಬ್ರೇಝಾ, 1 ಬೊಲೆರೂ, 1 ಸ್ವಿಪ್ಟ್, 1 ಎಕ್ಸ್ ಯೂವಿ ಕಾರು, 45 ಆರ್ಸಿ ಕಾರ್ಡುಗಳು, ಒಂದು ಕಂಪ್ಯೂಟರ್, ಸ್ಮಾರ್ಟ್ ಕಾರ್ಡ್ ಮುದ್ರಿಸುವ ಪ್ರಿಂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.