ಬೆಂಗಳೂರು: ಮಹಾದೇವಪುರ ಕ್ಷೇತ್ರದ ದೊಡ್ಡಬನಹಳ್ಳಿಯಲ್ಲಿ ಬುದ್ಧ ಭೂಮಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ವೈಶಾಖ ಬುದ್ಧ ಪೂರ್ಣಿಮೆ ಆಚರಣೆ ಮಾಡಲಾಯಿತು.
ಬುದ್ದ ಭೂಮಿ ಪ್ರತಿಷ್ಠಾನದ ವತಿಯಿಂದ ಮಹಾದೇವಪುರ ಕ್ಷೇತ್ರದ ದೊಡ್ಡಬನಹಳ್ಳಿಯಲ್ಲಿ ವೈಶಾಖ ಬುದ್ಧ ಪೂರ್ಣಿಮೆ ಧರ್ಮ ದೀಕ್ಷಾ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು. ದೊಡ್ಡಬನಹಳ್ಳಿ ಬುದ್ಧ ಭೂಮಿ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷರಾದ ಎಂ.ಆರ್.ವೆಂಕಟೇಶ್ ಅವರು ಮಾತನಾಡಿ ವಿಶ್ವಕ್ಕೆ ಜ್ಞಾನ, ಶಾಂತಿ ನೀಡಿದ ಭಗವಾನ್ ಬುದ್ಧ ವಿಚಾರಧಾರೆಗಳು ಶತ ಶತಮಾನಗಳಿಗೂ ಪ್ರಸ್ತುತ. ತತ್ವಜ್ಞಾನಿ ಬುದ್ದರ ಆಚಾರ ವಿಚಾರಗಳ ಶತ ಹಾದಿಯಲ್ಲಿ ಸಾಗುವಂತೆ ಮನವಿ ಮಾಡಿದರು.
ಪುನಃ ಮಾತನಾಡಿ ಗೌತಮ ಬುದ್ಧ ಬೌದ್ಧ ಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಬುದ್ಧನ ಧ್ಯಾನ ಮಾರ್ಗವು ದುಃಖ ಮತ್ತು ಪಾಪ ಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಅಹಿಂಸಾ ತತ್ವ ಸಾರಿದ ಮಹಾನ್ ಜ್ಞಾನಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆನ್ನಗಾನಹಳ್ಳಿ ರಾಮಚಂದ್ರ, ಕೆ.ಜೆ.ಎಸ್ ಗುಣಶೇಖರ್, ತಾಲ್ಲೂಕು ಪಂಚಾಯತಿ ಸದಸ್ಯ ಮುನಿರಾಜು, ಬೆಳತ್ತೂರು ರಮೇಶ್, ಮುಖಂಡರಾದ ದೇವರಾಜ್, ಟ್ರಸ್ಟ್ನ ಮುನಿಯಲ್ಲಪ್ಪ ಸೇರಿದಂತೆ ಮೊದಲಾದವರು ಹಾಜರಿದ್ದರು.