ದೇವನಹಳ್ಳಿ: ಆಸ್ತಿ ಹೊಡೆಯಲು ಸುಪಾರಿ ಕೊಟ್ಟು ಅತ್ತಿಗೆಯನ್ನ ಕೊಲ್ಲಿಸಿದ ಬಾಮೈದ ಹಾಗೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ಕಗ್ಗಲಹಳ್ಳಿಯ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ರತ್ಮಮ್ಮ (50) ಅವರ ಮನೆಗೆ ಡಿಸೆಂಬರ್ 22ರಂದು ಆರೋಪಿ ನುಗ್ಗಿ, ಕೊಲೆಗೈದು ಬಳಿಕ ಚಿನ್ನದ ಸರ ದೋಚಿ ಪರಾರಿಯಾಗಿದ್ದ. ನಂತರ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು, ಇಬ್ಬರು ಆರೋಪಿಗಳನ್ನ ಪತ್ತೆ ಮಾಡಿದ್ದಾರೆ.
ಬಾಮೈದನ ಸುಪಾರಿಗೆ ಕೊಲೆಯಾದ ಅತ್ತಿಗೆ:
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಮೈದ ನಾಗೇಶ್ ಬಿನ್ ಸೊಣ್ಣಪ್ಪ (45) ಹಾಗೂ ಕೊಲೆಗೈದ ಆತನ ಸ್ನೇಹಿತ ಲಕ್ಷೀಶ (40)ನನ್ನು ಬಂಧಿಸಲಾಗಿದೆ.
ನಾಗೇಶ್ ಮತ್ತು ಕೊಲೆಯಾದ ರತ್ನಮ್ಮ ನಡುವೆ ಆಸ್ತಿ ಕಲಹವಿತ್ತು. ಇದರಿಂದ ರತ್ನಮ್ಮ ಕೋರ್ಟ್ನಲ್ಲಿ ದಾವೆ ಹೂಡಿದ್ದರು. ಇದೇ ಕಾರಣಕ್ಕೆ ಅತ್ತಿಗೆ ಮೇಲೆ ದ್ವೇಷ ಸಾಧಿಸುತ್ತಿದ್ದ ಬಾಮೈದ ನಾಗೇಶ್ ತನ್ನ ಸ್ನೇಹಿತ ಲಕ್ಷ್ಮೀಶನಿಗೆ 2 ಲಕ್ಷ ಸುಪಾರಿ ಕೊಟ್ಟು ಕೊಲೆ ಮಾಡಲು ಹೇಳಿದ್ದ. ಸುಪಾರಿ ಪಡೆದ ಲಕ್ಷ್ಮೀಶ, ಒಂಟಿಯಾಗಿದ್ದ ರತ್ನಮ್ಮ ಮನೆಗೆ ನುಗ್ಗಿ ಹತ್ಯೆಗೈದಿದ್ದ. ಬಳಿಕ ಚಿನ್ನದ ಸರವನ್ನು ಚಿಕ್ಕಬಳ್ಳಾಪುರದ ಮುತ್ತೂಟ್ ಫೈನಾನ್ಸ್ನಲ್ಲಿ ಅಡವಿಟ್ಟು 70 ಸಾವಿರ ಸಾಲ ಪಡೆದಿದ್ದ ಎನ್ನಲಾಗಿದೆ.