ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಇಂದು ಹೊಸಕೋಟೆಯ ಮಾಜಿ ಶಾಸಕ ಎಂಟಿಬಿ ನಾಗರಾಜ್ ಅವರ ಗರಡುಚಾರಪಾಳ್ಯದ ನಿವಾಸಕ್ಕೆ ಭೇಟಿ ನೀಡಿ ಲೋಕಸಭಾ ಚುನಾವಣೆ ಸಂಬಂಧ ಚರ್ಚೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, "ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಎಂಟಿಬಿ ನಾಗರಾಜ್ ಅವರನ್ನು ಭೇಟಿಯಾಗಿದ್ದೇನೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಎಂಟಿಬಿ ನಾಗರಾಜ್ ವ್ಯಕ್ತಿಯಲ್ಲ, ಶಕ್ತಿ. ಇಡೀ ರಾಜ್ಯದಲ್ಲಿ ಅವರದೇ ಆದಂತಹ ಜನ ಬೆಂಬಲವನ್ನು ಗಳಿಸಿಕೊಂಡಿರುವ ಎಂಟಿಬಿ ನಾಗರಾಜ್ ಅವರು ಬಿಜೆಪಿಯ ಶಕ್ತಿಯಾಗಿ ದುಡಿಯುತ್ತಿದ್ದಾರೆ" ಎಂದರು.
"ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲು ನಿಮ್ಮೊಟ್ಟಿಗೆ ನಿಲ್ಲುತ್ತೇವೆ ಎಂದು ಎಂಟಿಬಿ ನಾಗರಾಜ್ ಅವರು ಭರವಸೆ ನೀಡಿದ್ದಾರೆ. ಅವರನ್ನು ಭೇಟಿ ಮಾಡಿದ್ದಕ್ಕೆ ತುಂಬಾ ಸಂತೋಷ ಆಗಿದೆ. ಅವರ ಮಾರ್ಗದರ್ಶನವನ್ನು ಪಕ್ಷ ತೆಗೆದುಕೊಳ್ಳುತ್ತದೆ. ಚಿಕ್ಕಬಳ್ಳಾಪುರ ಎಂಪಿ ಕ್ಷೇತ್ರ ಗೆಲ್ಲಲು ತಯಾರಿ ಮಾಡಿಕೊಂಡಿದ್ದೇವೆ. ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಆಗಬೇಕು ಎಂಬುದರ ಕುರಿತು ಮುಂದೆ ಚರ್ಚೆ ಆಗುತ್ತದೆ. ಪಕ್ಷದ ಹಿರಿಯರ ಜೊತೆಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.
ವಿಜಯೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದೇನೆ: ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, "ರಾಜ್ಯಾಧ್ಯಕ್ಷರಾದ ಮೇಲೆ ವಿಜಯೇಂದ್ರ ಅವರು ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿ ಮಾಡಲು ಸಂಕಲ್ಪ ಮಾಡಿದ್ದಾರೆ. ಅದರ ಭಾಗವಾಗಿ ಸೌಹಾರ್ದಯುತವಾಗಿ ಭೇಟಿಯಾಗಿದ್ದಾರೆ. ನಾನು ಕೂಡ ಅವರಿಗೆ ಆಶೀರ್ವಾದ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೆ ವಿಜಯೇಂದ್ರ ಪ್ರವಾಸ ಮಾಡಲಿ. ಸಂಸತ್ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿ. ಭೇಟಿ ವೇಳೆ ಜವಾಬ್ದಾರಿ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು. ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿ, ಪಕ್ಷದ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ" ಎಂದು ತಿಳಿಸಿದರು.
ಇದಕ್ಕೂ ಮೊದಲು ಗರುಡಾಚಾರಪಾಳ್ಯದಲ್ಲಿರುವ ಎಂಎಲ್ಸಿ ಎಂಟಿಬಿ ನಾಗರಾಜ್ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ರಾಜ್ಯಾಧ್ಯಕ್ಷರನ್ನು ಹೂಗುಚ್ಛ ನೀಡಿ ಎಂಟಿಬಿ ಬರಮಾಡಿಕೊಂಡರು.
ಇದನ್ನೂ ಓದಿ: ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್, ಕಾಂಗ್ರೆಸ್ ಪಕ್ಷಕ್ಕೆ ವಿನಾಶಕಾಲೇ ವಿಪರೀತ ಬುದ್ಧಿ: ವಿಜಯೇಂದ್ರ ಕಿಡಿ