ದೊಡ್ಡಬಳ್ಳಾಪುರ: ವರ್ಲ್ಡ್ ವೆಟ್ ಲ್ಯಾಂಡ್ ಡೇ ಅಂಗವಾಗಿ ಪಕ್ಷಿಗಳ ವೀಕ್ಷಣೆ ಮತ್ತು ಸಮೀಕ್ಷೆಯನ್ನ ನಗರದ ನಾಗರಕೆರೆಯಲ್ಲಿ ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆಯಿಂದ ಮಾಡಲಾಗಿತ್ತು.

ಫೆಬ್ರವರಿ 2, 1971 ರಲ್ಲಿ ಇರಾನ್ನ ರಾಮ್ಸರ್ ಎಂಬ ಸ್ಥಳದಲ್ಲಿ ಜಗತ್ತಿನ ವೆಟ್ಲ್ಯಾಂಡ್ಸ್ ಗಳನ್ನು ಸಂರಕ್ಷಿಸಲು ಅಂತಾರಾಷ್ಟ್ರೀಯ ಒಪ್ಪಂದವಾಯಿತು. ಅದರ ಅಂಗವಾಗಿ ಹಲವು ದೇಶಗಳಲ್ಲಿ ಫೆಬ್ರವರಿ 2 ಮತ್ತು ಮೊದಲ ವಾರ ವಿಶ್ವ ವೆಟ್ಲ್ಯಾಂಡ್ಸ್ ದಿನವನ್ನು ಆಚರಿಸಲಾಗುತ್ತಿದೆ.

ನೀರು ಮತ್ತು ಭೂಮಿ ಸೇರಿರುವ ಜಾಗವನ್ನು ವೆಟ್ ಲ್ಯಾಂಡ್ ಎಂದು ಕರೆಯಲಾಗುತ್ತದೆ. ಕೆರೆ, ಕುಂಟೆ, ಕಟ್ಟೆ, ಸರೋವರ, ನದಿ, ಕಾಲುವೆ, ಅಳಿವೆ, ಜೌಗು ಪ್ರದೇಶ, ಜಲಾಶಯಗಳ ಹಿನ್ನೀರು, ಹವಳ ದಂಡೆ, ಕಾಂಡ್ಲಾ ಕಾಡುಗಳು ವೆಟ್ ಲ್ಯಾಂಡ್ ಪ್ರದೇಶವಾಗಿದೆ.

ಈ ತಿಂಗಳು ಪೂರ್ತಿ ತಾಲೂಕಿನ ಅರ್ಕಾವತಿ ನದಿ ಪಾತ್ರದ ಪ್ರಮುಖ ಕೆರೆಗಳಲ್ಲಿ ಪಕ್ಷಿ ಸಮೀಕ್ಷೆ ನಡೆಸಲಾಗುವುದು. ಎರಡು ವರ್ಷಗಳ ಹಿಂದೆ 60ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ನಾಗರಕೆರೆಯಲ್ಲಿ ಗುರುತಿಸಲಾಗಿತ್ತು. ಆದರೆ, ಈ ವರ್ಷ 40 ಪ್ರಭೇದಕ್ಕೆ ಇಳಿದಿದೆ. ಈ ಬಾರಿ ಮಳೆಗಾಲ ಮುಂದುವರಿದ ಪರಿಣಾಮ ಚಳಿಗಾಲದಲ್ಲಿ ಬರಬೇಕಾದರೆ ವಲಸೆ ಹಕ್ಕಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

ಅರ್ಕಾವತಿ ನದಿ ಪಾತ್ರದಲ್ಲಿ ಸಾಮಾನ್ಯವಾಗಿ ಕಾಣುವ ವಲಸೆ ಪಕ್ಷಿಗಳನ್ನ ಗುರುತಿಸಲಾಗಿದೆ. ಯುರೋಪ್ ಖಂಡದಿಂದ ಬರುವ ಚಲುಕ ಬಾತು, ಸೂಜಿಬಾಲದ ಬಾತು, ಬಿಳಿ ಹುಬ್ಬಿನ ಬಾತು, ಜೌಗು ಸೆಳೆವ, ಅಡವಿ ಗದ್ದೆಗೊರವ, ಗದ್ದೆಗೊರವ, ಕವಲು ತೋಕೆ, ಗುಲಾಬಿ ಕಬ್ಬಕ್ಕಿ, ಹಳದಿ ಸಿಪಿಲೆ ಪಕ್ಷಿಗಳು ವಲಸೆ ಬರುತ್ತವೆ.
ಓದಿ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಗಂಧ ಗಾಳಿ ಗೊತ್ತಿಲ್ಲ: ಸಚಿವ ಸೋಮಶೇಖರ್