ದೊಡ್ಡಬಳ್ಳಾಪುರ : ರಾಜ್ಯದಲ್ಲಿ ಈಗಾಗಲೇ ಕುರುಬ, ಪಂಚಮಸಾಲಿ ಸಮುದಾಯದವರು ಮೀಸಲಾತಿಗಾಗಿ ಪ್ರತಿಭಟನೆಯ ದಾರಿ ಹಿಡಿದಿದ್ದಾರೆ. ಇದೀಗ ದೇವಾಂಗ ಸಮುದಾಯ ದೇವಾಂಗ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ನಗರದಲ್ಲಿ ಬೈಕ್ ರ್ಯಾಲಿ ನಡೆಸಿದೆ.
ದೇವಾಂಗ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದೆ. ರಾಜ್ಯದಲ್ಲಿ ದೇವಾಂಗ ಸಮುದಾಯದ ಜನರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮದ ಅವಶ್ಯಕತೆ ಇದೆ. ಈ ಕುರಿತು ಸರ್ಕಾರದ ಗಮನಕ್ಕೆ ಹಲವು ಬಾರಿ ತರಲಾಗಿದೆ. ಆದರೆ, ಸರ್ಕಾರ ಮಾತ್ರ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.
ಈಗಾಗಲೇ, ಸರ್ಕಾರ ಹಲವು ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ನಿಗಮ ಸ್ಥಾಪನೆ ಮಾಡಿದೆ. ಅದೇ ರೀತಿ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ನಿಗಮಕ್ಕೆ 500 ಕೋಟಿ ರೂ. ಮೀಸಲಿಡಬೇಕು ಎಂಬುದು ಸಮುದಾಯದ ಆಗ್ರಹವಾಗಿದೆ.
ರಾಜ್ಯಾದ್ಯಂತ ಸುಮಾರು 40 ಲಕ್ಷದಲ್ಲಿದ್ರೇ, ತಾಲೂಕಿನಲ್ಲಿ 60 ಸಾವಿರಕ್ಕೂ ಹೆಚ್ಚು ದೇವಾಂಗ ಸಮುದಾಯದ ಜನಸಂಖ್ಯೆ ಇದೆ. ಆದರೆ, ಈವರೆಗೆ ಯಾರೂ ಬಲಿಷ್ಠ ನಾಯಕರಾಗಿ ಗುರುತಿಸಿಕೊಂಡಿಲ್ಲ. ಕನಿಷ್ಟ 5 ರಿಂದ 10 ಮಂದಿ ಶಾಸಕರು ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಆಯ್ಕೆಯಾಗಬೇಕು.
ಆದರೆ, ಯಾವುದೇ ಪಕ್ಷ ನಮ್ಮನ್ನ ಗುರುತಿಸಿಲ್ಲ. ಕೂಡಲೇ ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಲೇಬೇಕು, ದೇವಾಂಗ ಅಭಿವೃದ್ಧಿ ನಿಗಮ ಮಂಡಳಿ, ರಾಜಕೀಯ, ಸಾಮಾಜಿಕ ಪ್ರಾತಿನಿಧ್ಯವನ್ನು ಮುಖ್ಯ ಅಜೆಂಡಾವಾಗಿಟ್ಟುಕೊಂಡು ನಗರದಲ್ಲಿ ಮಾರ್ಚ್ 1ಕ್ಕೆ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ವೇಳೆ ದೇವಾಂಗ ಜಗದ್ಗುರು ಶ್ರೀ ದಯಾನಂದಪುರಿ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಕೆ.ನಾರಾಯಣ, ರಾಜ್ಯ ದೇವಾಂಗ ಅಧ್ಯಕ್ಷ ರಮೇಶ್, ಹಂಪಿಯ ಗಾಯತ್ರಿ ಮಿತ್ರಪೀಠದ ಗಿರಿಯಪ್ಪ, ಆಂಧ್ರಪ್ರದೇಶದ ದೇವಾಂಗ ಸಂಘದ ಅಧ್ಯಕ್ಷ ಬೀರಪ್ಪ, ರವೀಂದ್ರ ಕಲಬುರಗಿ ಮುಂತಾದ ಮುಖಂಡರು ಭಾಗಿಯಾಗಲಿದ್ದಾರೆ.