ಹೊಸಕೋಟೆ: ನಗರದಲ್ಲಿ ಮೇದಾರರು ತಮ್ಮ ಪೂರ್ವಜರಿಂದ ಬಂದಿರುವ ಬಳುವಳಿಯಾಗಿ ಬಂದಿರುವ ಬಿದಿರಿನ ವಸ್ತುಗಳ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಆದರೆ ಕೊರೊನಾ, ಲಾಕ್ಡೌನ್ನಿಂದ ಯಾವುದೇ ವ್ಯಾಪಾರವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೊಟೆ ಪಾರ್ವತಿಪುರ ಬಡಾವಣೆಯಲ್ಲಿ ಸುಮಾರು 20 ಬಿದಿರಿನ ವಸ್ತಗಳ ಮಾರಾಟ ಅಂಗಡಿಗಳಿದ್ದು, ಇದೇ ವೃತ್ತಿಯನ್ನು ಅವಲಂಬಿಸಿರುವ ಕುಟುಂಬಗಳು ಸಾಕಷ್ಟಿವೆ. ಮೇದಾರರು ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಬಿದಿರಿನ ವಸ್ತುಗಳ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದು, ಆಧುನಿಕ ಪ್ಲಾಸ್ಟಿಕ್ ,ನೈಲಾನ್ ವಸ್ತುಗಳ ವ್ಯಾಪಾರಕ್ಕೆ ಸೆಡ್ಡು ಹೊಡೆದು ತರಹೇವಾರಿ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಇವರು ಬೆಳಗಾವಿ, ಮಹಾರಾಷ್ಟ್ರ,ಹುಬ್ಬಳ್ಳಿ ಧಾರವಾಡಗಳಿಂದ ಬಿದಿರು ಬಂಬಗಳನ್ನು ಲಾರಿಗಳಲ್ಲಿ ತಂದು ತಡಿಕೆ, ಮರ, ಬೀಸಣಿಕೆ, ಏಣಿ, ಬುಟ್ಟಿ, ಜತೊಲಿಗಳು, ಮಕ್ಕಳ ತೊಟ್ಟಿಲು ಇತ್ಯಾದಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಆದರೆ ಲಾಕ್‌ಡೌನ್ ಘೊಷಣೆಯಾದಗಿನಿಂದ ಸಂಚಾರ ಸ್ಥಗಿತವಾಗಿ ಕಚ್ಚಾ ವಸ್ತು ತರಲು ಸಾಧ್ಯವಾದರೆ, ಇತ್ತ ಸಿದ್ದಪಡಿಸಿದ ವಸ್ತುಗಳನ್ನು ಖರೀದಿಸಲು ಜನರು ಮುಂದೆ ಬರದ ಪರಿಣಾಮ ವ್ಯಾಪಾರದ ಮೇಲೆ ತೀವ್ರ ಹೊಡೆತ ಬಿದ್ದಿದೆ.
ಮಗುವಿನ ಹುಟ್ಟಿನಿಂದ ತೊಟ್ಟಿಲು ನಿಂದ ಶುರುವಾಗಿ ಸಾಯುವವರೆಗೂ ಚಟ್ಟ ದವರೆಗೆ ಬಿದಿರಿನ ವಸ್ತುಗಳ ಉಪಯೋಗ ಮಾಡಲಾಗುತ್ತಿತ್ತು. ಆದರೆ ಆಧುನಿಕ ಯುಗದಲ್ಲಿ ಪ್ಲಾಸ್ಟಿಕ್, ನೈಲಾನ್ ಇತ್ಯಾದಿ ಹಾವಳಿಯಿಂದ ಸ್ವಲ್ಪ ಮಟ್ಟಿಗೆ ಇವುಗಳ ಬಳಕೆ ಕಡಿಮೆಯಾಗಿದೆ. ಆದರೂ ಮದುವೆಯಂತಹ ಶುಭ ಸಮಾರಂಭಗಳಿಗೆ ಹಂದರ ಹಾಕಲು, ಫ್ಲೆಕ್ಸ್, ಬ್ಯಾನರ್ಗಳಿಗೆ ಬಂಬು ಬಲ್ಲಿಸ್, ಮನೆ, ಕಟ್ಟಡ ನಿರ್ಮಾಣ ಕೆಲಸಕ್ಕೆ ಬಿದಿರಿನ ಅವಶ್ಯಕತೆಯಿದೆ.
ಕೃಷಿ ಚಟುವಟಿಕೆಯಲ್ಲಿ ಕುಂಟೆ, ಪುಟ್ಟಿ ಇತರೆ ಬಿದಿರಿನ ವಸ್ತುಗಳ ಉಪಯೋಗ ಹೆಚ್ಚು. ಲಾಕ್‌ಡೌನ್‌ನಿಂದಾಗಿ ರೈತರು ಬೆಳೆಗೆ ಸರಿಯಾದ ಮಾರುಕಟ್ಟೆ ಹಾಗೂ ಬೆಲೆ ಬಾರದೆ ಪರಿತಪಿಸುವಂತಾಗಿದೆ. ವಿವಾಹ ಹಾಗೂ ಇತರೆ ಶುಭ ಕಾರ್ಯಗಳಿಗೂ ಬ್ರೇಕ್ ಬಿದ್ದಿದ್ದರಿಂದ ಬಿದಿರಿನ ವ್ಯಾಪಾರ ನೆಲಕಚ್ಚಿದೆ.
ಬಿದಿರಿನ ವ್ಯಾಪಾರ ವರ್ಷಪೂರ್ತಿ ಇರುವುದಿಲ್ಲ. ಜನವರಿಯಿಂದ ಜೂನ್‌ವರೆಗೆ ನಡೆಯುತ್ತದೆ. ಈ ವೇಳೆ ಸುಮಾರು 4 ರಿಂದ 5 ಲಾರಿ ಲೋಡ್ ಬಂಬೂಗಳು ಪ್ರತಿವರ್ಷ ಮಾರಾಟ ಆಗುತ್ತಿತ್ತು. ಈಗ ವ್ಯಾಪಾರ ಆರಂಭವಾಗಿದ್ದರೂ ಕೂಡ ಶೇ 10 ಮಾತ್ರ ವ್ಯಾಪಾರ ನಡೆಯುತ್ತಿದೆ. ಪ್ರತಿ ವರ್ಷ ಬೇಸಿಗೆಯ ಆರಂಭದ ಅವಧಿಯಲ್ಲಿ 80 ಸಾವಿರದಿಂದ 1 ಲಕ್ಷ ಲಾಭ ಬರುತ್ತಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಏನು ಲಾಭ ಸಿಕ್ಕಿಲ್ಲ. ಈ ವರ್ಷ ನಮಗೆ ಉಂಟಾಗಿರುವ ಸಮಸ್ಯೆಗೆ ಸರ್ಕಾರ ಇತ್ತ ಗಮನ ಹರಿಸಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.