ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿ ಮತ್ತು ನೇರಳೆ ಘಟ್ಟದಲ್ಲಿ ಎರಡು ಬಣಗಳ ನಡುವೆ ಮತದಾನಕ್ಕೆ ಸಂಬಂಧಿಸಿದಂತೆ ಘರ್ಷಣೆ ನಡೆದಿದೆ.
ಜಿಲ್ಲಾ ಪಂಚಾಯತ್ ಸದಸ್ಯ ಅಪ್ಪಯ್ಯಣ್ಣ ಅವರು ಶೆಟ್ಟಪ್ಪ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಘಟನೆ ನಡೆದಿದೆ.
ಹಾಡೋನಹಳ್ಳಿ ಗ್ರಾಮ ಪಂಚಾಯತ್ ಸಿಬ್ಬಂದಿ ಹರೀಶ್ ಎಂಬಾತ ಬೂತ್ ಒಳಗೆ ಕರೆದುಕೊಂಡು ಹೋಗಿ ಮತ ಹಾಕಿಸುತ್ತಿದ್ದ. ಈತ ಜಿಲ್ಲಾ ಪಂಚಾಯತ್ ಸದಸ್ಯ ಅಪ್ಪಯ್ಯಣ್ಣನ ಬೆಂಬಲಿಗನಾಗಿದ್ದು, ಮತಗಟ್ಟೆ ಕೇಂದ್ರದಲ್ಲಿ ಇವರಿಗೆ ಮತದಾನ ಮಾಡುವಂತೆ ಹೇಳುತ್ತಿದ್ದ. ಇದಕ್ಕೆ ಮತ್ತೊಂದು ಬಣದವರು ಆಕ್ಷೇಪ ವ್ಯಕ್ತಪಡಿಸಿದಾಗ ಮತಗಟ್ಟೆಯೊಳಗೆ ಎರಡು ಬಣಗಳ ನಡುವೆ ಘರ್ಷಣೆಯಾಗಿದೆ. ಈ ವೇಳೆ ಜಿಲ್ಲಾ ಪಂಚಾಯತ್ ಸದಸ್ಯ ಅಪ್ಪಯ್ಯಣ್ಣ ಅವರು ಶೆಟ್ಟಪ್ಪ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಅಪ್ಪಯ್ಯಣ್ಣನ ಬೆಂಬಲಿಗರು ಮತದಾರರಿಗೆ ಧಮ್ಕಿ ಹಾಕುವ ಮೂಲಕ ಭಯದ ವಾತಾವರಣ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಓದಿ: ಗ್ರಾಪಂ ಚುನಾವಣೆ ; ದೊಡ್ಡಬಳ್ಳಾಪುರದ ಹಳ್ಳಿಯೊಂದರಲ್ಲಿ ಕಣ ರಂಗುಗೊಳಿಸಿದ ಮಂಗಳಮುಖಿ
ನೇರಳೆಘಟ್ಟದಲ್ಲೂ ಸಹ ಮತದಾನ ಸಮಯದಲ್ಲಿ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಶಾಂತವಾಗಿದೆ ಎಂದು ತಿಳಿದು ಬಂದಿದೆ.