ನೆಲಮಂಗಲ: ಶ್ರೀಲಂಕಾದಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ನೆಲಮಂಗಲದ 7 ಜೆಡಿಎಸ್ ಮುಖಂಡರ ಮೃತದೇಹಗಳು ಮಧ್ಯರಾತ್ರಿ 2 ಗಂಟೆಗೆ ಆಗಮಿಸುವ ಸಾಧ್ಯತೆ ಇದೆ. ಮೃತರ ನಿವಾಸಗಳಲ್ಲಿ ಸ್ಮಶಾನ ಮೌನ ಅವರಿಸಿದ್ದು, ಮೃತರ ಅಂತಿಮ ದರ್ಶನಕ್ಕೆ ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಿದ್ಧತೆ ಮಾಡಲಾಗಿದೆ.
ಕಳೆದ ಭಾನುವಾರ ಶ್ರೀಲಂಕಾದಲ್ಲಿ ಸಂಭವಿಸಿದ ಉಗ್ರರ ನರಮೇಧದಲ್ಲಿ ನೆಲಮಂಗಲ ಮೂಲದ 7 ಜನ ಜೆಡಿಎಸ್ ಮುಖಂಡರು ಬಲಿಯಾಗಿದ್ದಾರೆ. ಲೋಕಸಭಾ ಚುನಾವಣಾಯಲ್ಲಿ ಕೆಲಸ ಮಾಡಿ ದಣಿದಿದ್ದ ತುಮಕೂರಿನ ನಿವಾಸಿ ರಮೇಶ್, ನೆಲಮಂಗಲದವರಾದ ಲಕ್ಷ್ಮೀನಾರಾಯಣ ಹಾಗೂ ಶಿವಕುಮಾರ್, ಅಡಕಮಾರನಹಳ್ಳಿ ಮಾರೇಗೌಡ, ವಿದ್ಯಾರಣ್ಯಪುರದ ರಂಗಪ್ಪ, ಟಿ.ದಾಸರಹಳ್ಳಿಯ ಹನುಮಂತರಾಯಪ್ಪ ಎಲ್ಲಾ ವಿಶ್ರಾಂತಿಗೆಂದು ಪಕ್ಕದ ಶ್ರೀಲಂಕಾಗೆ ತೆರಳಿದ್ದರು.
ಆದರೆ ಇಸ್ಲಾಮಿಕ್ ಉಗ್ರರು ನಡೆಸಿದ ಪೈಶಾಚಿಕ ಕೃತ್ಯಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಆದರೆ ಘಟನೆ ನಡೆದು ಎರಡು ದಿನಗಳಾದರೂ ಈವರೆಗೆ ಮೃತರ ಪಾರ್ಥಿವ ಶರೀರಗಳು ಸ್ವಗ್ರಾಮಗಳಿಗೆ ತಲುಪಿಲ್ಲ. ಇಂದು ಮಧ್ಯರಾತ್ರಿ 2 ಗಂಟೆ ವೇಳೆಗೆ ವಿಶೇಷ ವಿಮಾನದ ಮುಖಾಂತರ ಆಗಮಿಸುವ ಸಾಧ್ಯತೆ ಇದೆ.
ಈಗಾಗಲೇ ಬೆಂಗಳೂರಿನಿಂದ ಶ್ರೀಲಂಕಾಗೆ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಹಾಗೂ ಜೆಡಿಎಸ್ ಮುಖಂಡರು ತೆರಳಿದ್ದು, ಮೃತದೇಹಗಳನ್ನು ಸ್ವದೇಶಕ್ಕೆ ತರಲು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅನುಮತಿ ಸಿಕ್ಕ ಕೂಡಲೇ ಮೃತದೇಹಗಳನ್ನು ಬೆಂಗಳೂರಿಗೆ ತರುವ ಎಲ್ಲಾ ಸಿದ್ದತೆಯನ್ನು ಕುಟುಂಬಸ್ಥರು ಮಾಡಿಕೊಂಡಿದ್ದು, ನಂತರ ನೆಲಮಂಗಲ, ದಾಸರಹಳ್ಳಿ, ತುಮಕೂರಿನ ಸ್ವಗ್ರಾಮಗಳಿಗೆ ಮೃತದೇಹಗಳನ್ನು ರವಾನಿಸುವ ಸಾಧ್ಯತೆ ಇದೆ.
ನೆಲಮಂಗಲ ಪಟ್ಟಣದ ನಿವಾಸಿಗಳೇ ಆಗಿದ್ದ ಮೃತ ಶಿವಕುಮಾರ್ ಮತ್ತು ಲಕ್ಷ್ಮಿನಾರಾಯಣ್ ಮೃತ ದೇಹಗಳು ನಾಳೆ ಮುಂಜಾನೆ ಹೊತ್ತಿಗೆ ನೆಲಮಂಗಲ ತಲುಪುವ ಸಾಧ್ಯತೆ ಇದೆ. ನೆಲಮಂಗಲದ ಮೃತರು ಜೆಡಿಎಸ್ ಪಕ್ಷದ ಪ್ರಭಾವಿ ಮುಖಂಡರು ಮತ್ತು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಮೃತರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅಂತಿಮ ದರ್ಶನ ಪಡೆಯುವ ಕಾರಣಕ್ಕೆ ನೆಲಮಂಗಲ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಿದ್ಧತೆ ಮಾಡಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಬರಲಿದ್ದು, ಮುಂಜಾನೆಯಿಂದಲೇ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಂತಿಮ ದರ್ಶನ ಪಡೆಯಬಹುದು. ಬೆಳಗ್ಗೆ 10 ಗಂಟೆಯ ನಂತರ ಕ್ರೀಡಾಂಗಣದಿಂದ ಮೃತರ ಸ್ವಗ್ರಾಮಕ್ಕೆ ಮೃತದೇಹ ಮೆರವಣಿಗೆಯ ಮೂಲಕ ಸಾಗಲಿದ್ದು, ಮಧ್ಯಾಹ್ನದ ನಂತರ ಧಾರ್ಮಿಕ ವಿಧಿ ವಿಧಾನಗಳಂತೆ ಅಂತಿಮ ಸಂಸ್ಕಾರ ನಡೆಯಲಿದೆ ಎನ್ನಲಾಗಿದೆ.