ದೊಡ್ಡಬಳ್ಳಾಪುರ (ಬೆಂ.ಗ್ರಾ): ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ಶಿಕ್ಷಕರ ಮೇಲೆ ಜೆಡಿಎಸ್ ಮುಖಂಡರು ಬೆದರಿಕೆ ಹಾಕುತ್ತಿದ್ದಾರೆ. ಶಿಕ್ಷಕರು ಭಯದಲ್ಲಿ ಮತ ಚಲಾಯಿಸಬೇಕಾದ ವಾತಾವರಣ ನಿರ್ಮಾಣವಾಗಿದೆ ಎಂದು ಬಿಜೆಪಿಯ ಕಾನೂನು ಪ್ರಕೋಷ್ಠಕದ ರಾಜ್ಯ ಸಮಿತಿ ಸದಸ್ಯ ರವಿ ಮಾವಿನಕುಂಟೆ ಆರೋಪಿಸಿದ್ದಾರೆ.
ನಗರದ ಕನ್ನಡ ಜಾಗೃತ ಭವನದಲ್ಲಿ ಮಾತಾನಾಡಿದ ಅವರು, ಶಿಕ್ಷಕರ ಕ್ಷೇತ್ರದಿಂದ ಮೂರು ಸಲ ಆಯ್ಕೆಯಾಗಿರುವ ಪುಟ್ಟಣ್ಣ ಅವರ ಕಾರ್ಯವೈಖರಿಗೆ ಶಿಕ್ಷಕರು ನೀಡಿರುವ ಬೆಂಬಲ ಸಾಕ್ಷಿಯಾಗಿದೆ. ಈ ಚುನಾವಣೆಯಲ್ಲಿಯೂ ಸಹ ಪುಟ್ಟಣ್ಣರ ಕಡೆ ಹೆಚ್ಚಿನ ಶಿಕ್ಷಕರು ಒಲವು ಹೊಂದಿರುವುದನ್ನು ಸಹಿಸಲಾರದೇ ಜೆಡಿಎಸ್ ಪಕ್ಷದ ಮುಖಂಡರು ಬೆದರಿಕೆ, ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಗಳು ಕೇಳಿ ಬಂದಿವೆ. ಅಂತಹ ಶಿಕ್ಷಕರು ಯಾವುದೇ ಬೆದರಿಕೆ ಬಗ್ಗದೇ ಕಾನೂನು ಪ್ರಕೋಷ್ಠದ ನೆರವನ್ನು ಪಡೆಯಬಹುದಾಗಿದೆ ಎಂದರು.
ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಆನಂದ್ ಕುಮಾರ್ ಮಾತನಾಡಿ, ಚುನಾವಣೆಯಲ್ಲಿ ಶಿಕ್ಷಕರಿಗೆ ಬೆದರಿಕೆ ಹಾಕುವುದು ಖಂಡನೀಯ, ಪ್ರಜಾಪ್ರಭುತ್ವದಲ್ಲಿ ಮತದಾನ ಒಂದು ಮೂಲ ಹಕ್ಕಾಗಿದ್ದು, ಬೆದರಿಕೆ, ಒತ್ತಡ ಹೇರುವುದು ಕಾನೂನು ಪ್ರಕಾರ ಅಪರಾಧವಾಗಲಿದೆ. ಈ ನಿಟ್ಟಿನಲ್ಲಿ ಬೆದರಿಕೆಗೆ ಒಳಗಾಗುವ ಶಿಕ್ಷಕರು ಯಾವುದೇ ಅಂಜಿಕೆ ಇಲ್ಲದೇ ಸಾಕ್ಷಿ ಸಮೇತ ಪ್ರಕೋಷ್ಠದ ಸಹಾಯ ಕೋರಿದರೆ ಕಾನೂನು ಕ್ರಮ ಕೈಗೊಳ್ಳಲು ಚುನಾವಣೆ ಆಯೋಗ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದರು.