ದೊಡ್ಡಬಳ್ಳಾಪುರ: ಕೌಟುಂಬಿಕ ಕಲಹ ಹಿನ್ನೆಲೆ ಗಂಡನ ಮನೆ ಬಿಟ್ಟು ತವರು ಮನೆಗೆ ಬಂದಿದ್ದ ಪತ್ನಿಯ ಊರಿಗೆ ಬಂದ ಪತಿ, ಮಾವನ ಜೊತೆ ಕುಡಿಯೋದಕ್ಕೆ ಎಂದು ಹೋಗಿದ್ದಾನೆ. ಈ ವೇಳೆ ಹೆಂಡತಿ ಜೊತೆ ಮೊಬೈಲ್ನಲ್ಲಿ ಮಾತನಾಡುತ್ತಲೇ ಮಾವನನ್ನ ಕೊಲೆ ಮಾಡಿದ ಅಳಿಯ ಅಲ್ಲಿಂದ ಪರಾರಿಯಾಗಿರುವ ಘಟನೆ ನಡೆದಿದೆ.
ಘಟನೆ ಹಿನ್ನೆಲೆ: ಕೋಲಾರ ಮೂಲದ ಪ್ರತಾಪ್ ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಗ್ರಾಮದ ಯುವತಿಯನ್ನ ಮದುವೆಯಾಗಿದ್ದ, ಹೆರಿಗೆ ಕಾರಣಕ್ಕೆ ತವರಿಗೆ ಬಂದಿದ್ದ ಹೆಂಡತಿ ಕೌಟುಂಬಿಕ ಕಲಹದಿಂದ ತವರು ಮನೆಯಲ್ಲೇ ಉಳಿದಿದ್ದಳು. ಒಂದೂವರೆ ವರ್ಷದಿಂದ ಹೆಂಡತಿ ಗಂಡನ ಮನೆಗೆ ಹೋಗಿರಲಿಲ್ಲ. ಇನ್ನು ಮಗು ನೋಡಲು ಪತಿಗೆ ಅವಕಾಶವನ್ನೂ ಕೊಟ್ಟಿರಲಿಲ್ಲ. ಇದರಿಂದ ಪತಿ ಪ್ರತಾಪ್ಗೆ ಹೆಂಡತಿ ಮನೆಯವರ ಮೇಲೆ ಕೋಪ ಇತ್ತು. ನಿನ್ನೆ ಮತ್ತೆ ಮಗು ನೋಡಲೆಂದು ಪ್ರತಾಪ್ ಆರೂಢಿ ಗ್ರಾಮಕ್ಕೆ ಬಂದಿದ್ದ.
ಆಗಲೂ ಮನೆಯವರು ಮಗುವನ್ನ ನೋಡಲು ಪ್ರತಾಪ್ಗೆ ಬಿಟ್ಟಿರಲಿಲ್ಲ. ಇದರಿಂದ ಕೋಪಗೊಂಡ ಪ್ರತಾಪ್ ಮಾವ ಸುಬ್ಬರಾಯಪ್ಪನನ್ನ ಕರ್ಕೊಂಡು ಕುಡಿಯಲು ಹೋಗಿದ್ದಾನೆ. ಸಂಜೆಯಾದರೂ ತನ್ನ ತಂದೆ ಮನೆಗೆ ಬರದಿದ್ದಾಗ ಹೆಂಡತಿ ಗಂಡ ಪ್ರತಾಪ್ಗೆ ಕರೆ ಮಾಡಿದ್ದಾಳೆ. ಪೋನ್ನಲ್ಲಿ ಹೆಂಡತಿ ಜೊತೆ ಮಾತನಾಡುತ್ತಿರುವಾಗಲೇ ಪ್ರತಾಪ್, ಮಾವನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.
ಸಾಕ್ಷಿಗಾಗಿ ಮಾವನ ಮೃತದೇಹದ ಪೋಟೋ ಕಳಿಸಿದ ಪತಿ: ಗಂಡನ ವರ್ತನೆಯಿಂದ ಅನುಮಾನಗೊಂಡ ಹೆಂಡತಿ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾಳೆ, ಆಕೆಯ ಸಂಬಂಧಿಕರು ಸುಬ್ಬರಾಯಪ್ಪ ಎಲ್ಲಿ ಎಂದು ಕೇಳಿದಾಗ ಕೊಲೆ ಮಾಡಿದ್ದಾಗಿ ಹೇಳಿದಲ್ಲದೇ ಸಾಕ್ಷಿಯಾಗಿ ಸುಬ್ಬರಾಯಪ್ಪನ ಮೃತದೇಹದ ಪೋಟೋವನ್ನ ವಾಟ್ಸ್ಆ್ಯಪ್ನಲ್ಲಿ ಕಳುಹಿಸಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಕೊಲೆಯಾದ ಸ್ಥಳದ ಗೊತ್ತಾಗದ ಹಿನ್ನೆಲೆ ಸುಬ್ಬರಾಯಪ್ಪನ ಸಂಬಂಧಿಕರು ಹೊಸಹಳ್ಳಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ದೊಡ್ಡಬೆಳವಂಗಲ, ಹೊಸಹಳ್ಳಿ ಮತ್ತು ನೆಲಮಂಗಲ ಪೊಲೀಸರ ಸಹಾಯದಿಂದ ಶವವನ್ನ ಪತ್ತೆ ಮಾಡಲಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪಿ ಗಾರ್ಡನ್ ಬಳಿ ಶವ ಪತ್ತೆಯಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಹರಿದ ನೆತ್ತರು.. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಯುವಕನ ಬರ್ಬರ ಕೊಲೆ