ನೆಲಮಂಗಲ(ಬೆ.ಗ್ರಾಮಾಂತರ) : ನಗರದಲ್ಲಿ ಬೆಳಗ್ಗೆ ದುರಂತವೊಂದು ಸಂಭವಿಸಿದೆ. ಮನೆಯ ಮುಂದೆ ಆಟವಾಡುತ್ತಿದ್ದ 11 ತಿಂಗಳ ಮಗು ಮನೆಯ ಮುಂಭಾಗದಲ್ಲಿದ್ದ ಚರಂಡಿಯಲ್ಲಿ ಮುಳುಗಿ ಸಾವನ್ನಪ್ಪಿರುವ ರ್ದುಘಟನೆ ತಾಲೂಕಿನ ಸೋಂಪುರ ಹೋಬಳಿಯ ನಿಡವಂದ ಕಾಲೋನಿಯಲ್ಲಿ ನಡೆದಿದೆ.
ಘಟನೆ ವಿವರ: ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಮನೆಯ ಅಂಗಳದಲ್ಲಿ ಮಗು ಆಟವಾಡಿ, ಮನೆಯ ಮುಂದೆ ನಿಂತಿದ್ದ ಕ್ಯಾಂಟರ್ ಕೆಳಗೆ ನುಸುಳಿ ಹೋಗಿದೆ. ಆದರೆ ಅಲ್ಲೇ ಸುಮಾರು 4 ಅಡಿಯ ಚರಂಡಿಯು ತೆರೆದಿತ್ತು, ಇದೇ ಚರಂಡಿಗೆ ಮಗು ಬಿದ್ದು ಸಾವನ್ನಪ್ಪಿದೆ. ಮನೆಯ ಸುತ್ತಮುತ್ತ ಪೋಷಕರು ಹುಡುಕಾಡಿದರೂ, ಮಗು ಕಾಣಸಿಗಲಿಲ್ಲ.
ಇದನ್ನೂ ಓದಿ: ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಬಾಲಕಿ ಸಾವು
ನಂತರ ಮಗು ರಾಜ್ ಕುಮಾರ್ (11 ತಿಂಗಳು) ಚರಂಡಿಯಲ್ಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಉಮೇಶ್ ಸಿಂಗ್, ಅನಿತಾ ದೇವಿ ಮೃತ ರಾಜ್ ಕುಮಾರ್ ಮಗುವಿನ ತಂದೆ ತಾಯಿಯಾಗಿದ್ದಾರೆ. ಇವರು ಬಿಹಾರ ರಾಜ್ಯದ ಬಕ್ಸಾರ್ ಜಿಲ್ಲೆಯ ನೋನ್ ಪುರ ಗ್ರಾಮದವರಾಗಿದ್ದು, ಡಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಸ್ಯಾಟ್ರಾಕ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಮಗುವಿನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳೀಯ ಆಡಳಿತದಿಂದ ಚರಂಡಿ ನಿರ್ವಹಣೆ ಸೂಕ್ತವಾಗಿರದ ಹಿನ್ನೆಲೆಯಲ್ಲಿ, ಈ ಘಟನೆ ಸಂಭವಿಸಿದೆ ಎಂದು ಕುಟುಂಬದವರು ಆರೋಪಿಸುತ್ತಿದ್ದಾರೆ. ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: BWSSB ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಗು ಸಾವು; ಇಂಜಿನಿಯರ್ ಹಾಗೂ ಕಂಟ್ರಾಕ್ಟರ್ ವಿರುದ್ಧ ಪ್ರಕರಣ ದಾಖಲು
ಬೆಂಗಳೂರಿನಲ್ಲಿ ಕಾಮಗಾರಿ ಗುಂಡಿಗೆ ಬಿದ್ದು ಮಗು ಸಾವು: ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಗೊಲ್ಲರಹಟ್ಟಿ ಪೈಪ್ ಲೇನ್ನಲ್ಲಿ ಬಿಡಬ್ಲ್ಯೂಎಸ್ಎಸ್ ಬಿ ಯ ಕಾಮಗಾರಿ ಗುಂಡಿಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಉತ್ತರ ಪ್ರದೇಶ ಮೂಲದ ಹನುಮಾನ್ ದಂಪತಿಯ ಎರುಡೂವರೆ ವರ್ಷದ ಗಂಡು ಮಗು ಕಾರ್ತಿಕ್ ಮೃತಪಟ್ಟಿತ್ತು. ಕೆಲಸದ ನಿಮಿತ್ತ ಹನುಮಾನ್ ಮನೆಯಿಂದ ಹೊರ ಹೋಗಿದ್ದಾಗ ಪತ್ನಿ ಹಂಸ ಹಾಗೂ ಮಗು ಕಾರ್ತಿಕ್ ಮನೆಯಲ್ಲಿದ್ದರು.
ಈ ವೇಳೆ ಆಟವಾಡಲು ಮನೆಯಿಂದ ಹೊರಬಂದ ಮಗು ಬಿಡಬ್ಲ್ಯೂಎಸ್ಎಸ್ ಬಿ ಯ ಕಾಮಗಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿದೆ. ಕಾಮಗಾರಿ ಹೆಸರಿನಲ್ಲಿ ಗುಂಡಿ ತೆಗೆದು ಹಾಗೆ ಗುಂಡಿಯನ್ನು ಮುಚ್ಚದೆ, ಕನಿಷ್ಠ ಗುಂಡಿ ಸುತ್ತ ತಡೆಗೋಡೆ ನಿರ್ಮಿಸದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯವಾಗಿದೆ. ಇದು ಈ ಮಗುವಿನ ಸಾವಿನ ದುರಂತಕ್ಕೆ ಕಾರಣವಾಗಿದೆ. ಮಗು ಸಾವಿಗೆ ಕಾರಣರಾದ ಬಿಡಬ್ಲ್ಯೂಎಸ್ಎಸ್ ಬಿ ಇಂಜಿನಿಯರ್ ಹಾಗೂ ಕಾಂಟ್ರಾಕ್ಟರ್ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಇದನ್ನೂ ಓದಿ: ಶಿವಮೊಗ್ಗ: ಟ್ರಾಕ್ಟರ್ ಚಕ್ರದಡಿ ಸಿಲುಕಿ ಒಂದೂವರೆ ವರ್ಷದ ಮಗು ಸಾವು
ಇದನ್ನೂ ಓದಿ: ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಮಗು ಸಾವು: ವೈದ್ಯರ ವಿರುದ್ಧ ಪೋಷಕರ ಆಕ್ರೋಶ