ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆಯು 30.11.2020 ರಿಂದ ಜಾರಿಯಲ್ಲಿದ್ದು, 22.12.2020ರವರೆಗೆ ಅಬಕಾರಿ ಇಲಾಖೆಯಿಂದ ಕೈಗೊಂಡ ಜಾರಿ ಮತ್ತು ತನಿಖಾ ಕಾರ್ಯದಿಂದ ಜಿಲ್ಲೆಯ ವ್ಯಾಪ್ತಿಯಲ್ಲಿ 24 ಘೋರ ಪ್ರಕರಣಗಳು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನಕ್ಕೆ ಅವಕಾಶ ನೀಡಿದಂತಹ 96 ಪ್ರಕರಣಗಳು ಹಾಗೂ ಅಬಕಾರಿ ಸನ್ನದುಗಳಲ್ಲಿ ಸನ್ನದು ಷರತ್ತು ಉಲ್ಲಂಘನೆಯ 14 ಮೊಕದ್ದಮೆಗಳು ಸೇರಿದಂತೆ ಒಟ್ಟು 134 ಅಬಕಾರಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಸದರಿ ಮೊಕದ್ದಮೆಗಳಲ್ಲಿ ಒಟ್ಟು 322.245 ಲೀಟರ್ ಮದ್ಯ, 89.500 ಲೀಟರ್ ಬೀರ್, 16.500 ಲೀಟರ್ ವೈನ್(ಹೋಮ್‌ಮೇಡ್), 1.320 ಲೀಟರ್ ರಕ್ಷಣಾ ಇಲಾಖೆ ಉಪಯೋಗದ ಮದ್ಯವನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ. ಅಲ್ಲದೆ, ಅಕ್ರಮ ಮದ್ಯ ಸಾಗಣೆಗೆ ಉಪಯೋಗಿಸಿದ 16 ದ್ವಿಚಕ್ರ ವಾಹನಗಳು ಮತ್ತು ವೈನ್ ಅನ್ನು ಸಾಗಿಸಲು ಉಪಯೋಗಿಸುತ್ತಿದ್ದ ಕಾರನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ 109 ಜನರನ್ನು ದಸ್ತಗಿರಿ ಮಾಡಲಾಗಿದೆ.
ವಶಪಡಿಸಿಕೊಂಡಿರುವ ಮದ್ಯ ಮತ್ತು ಬೀರ್‌ನ ಒಟ್ಟು ಮೌಲ್ಯ ರೂ.1,15,000 ರೂ.ಗಳಾಗಿದೆ ಹಾಗೂ ವಾಹನಗಳ ಮೌಲ್ಯ ರೂ.4,00,000 ರೂ.ಗಳಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಹೋಟೆಲ್‌ಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದ ಕೊರೊನಾ