ಬಾಗಲಕೋಟೆ : ಐತಿಹಾಸಿಕ ಹಿನ್ನೆಲೆ ಹೊಂದಿರುವ ಹೋಳಿ ಹಬ್ಬವು ಮುಳುಗಡೆನಗರಿ ಬಾಗಲಕೋಟೆಯಲ್ಲಿ ರಂಗೇರಿದೆ. ಬಾಗಲಕೋಟೆಯಲ್ಲಿನ ಹೋಳಿ ಆಚರಣೆ ದೇಶದಲ್ಲಿಯೇ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಕಾಮ ದಹನದಿಂದ ಹಿಡಿದು,ಬಣ್ಣದ ಓಕುಳಿ ಆಟವು ಇಲ್ಲಿ ವಿಶೇಷವಾಗಿ ಸಂಪ್ರದಾಯದಂತೆ ಆಚರಿಸಲ್ಪಡುತ್ತದೆ. ಇತ್ತೀಚಿಗೆ ರೇನ್ ಡ್ಯಾನ್ಸ್ ಜೊತೆಗೆ ಓಕುಳಿ ಆಡುವುದು ಹೋಳಿ ಆಚರಣೆಗೆ ಇನ್ನಷ್ಟು ಮೆರಗನ್ನು ತಂದಿದೆ.
ಬಾಗಲಕೋಟೆ ನಗರದಲ್ಲಿ ಮೂರು ದಿನಗಳ ಕಾಲ ಹೋಳಿಯನ್ನು ಆಚರಿಸಲಾಗುತ್ತದೆ. ಕಾಮ ದಹನ ನಂತರ ಶುಕ್ರವಾರ, ಶನಿವಾರ ಹಾಗೂ ರವಿವಾರ ಮೂರು ದಿನಗಳ ಕಾಲ ಬಣ್ಣದ ಓಕುಳಿ ನಡೆಯುತ್ತದೆ. ಕಿಲ್ಲಾ, ಹೊಸಪೇಟೆ, ಹಳೆಪೇಟೆಯ ಪ್ರದೇಶದ ಜನರು ಒಂದೊಂದು ಹೋಳಿಯನ್ನು ಆಚರಿಸುತ್ತಾರೆ. ಆಯಾ ಪ್ರದೇಶದಲ್ಲಿ ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳಲ್ಲಿ ಬ್ಯಾರೆಲ್ ತುಂಬ ಬಣ್ಣವನ್ನು ತುಂಬಿಕೊಂಡು ಪರಸ್ಪರ ಎರಚಾಡುತ್ತಾರೆ. ಈ ಸಂಭ್ರಮ ನೋಡುವುದೇ ಕಣ್ಣಿಗೆ ಹಬ್ಬ.
ಜಿಲ್ಲೆಯ ಹೋಳಿ ಉತ್ಸವ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಮ್ಮೂರ ಹಬ್ಬದ ಬಣ್ಣದಾಟ ಕಾರ್ಯಕ್ರಮವನ್ನು ಇದೇ ವೇಳೆ ಆಯೋಜಿಸಲಾಗಿತ್ತು. ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಅವರು ಹಲಗೆ ಭಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಅಲ್ಲಿ ನೆರೆದಿದ್ದ ಜನಸ್ತೋಮ ಕಾರಂಜಿಯಿಂದ ಚಿಮ್ಮುವ ನೀರಿಗೆ ಡಿಜೆ ಹಾಡಿನೊಂದಿಗೆ ಕುಣಿದು ಕುಪ್ಪಳಿಸುವುದು ಗಮನ ಸೆಳೆಯಿತು. ಹೋಳಿ ಆಟದಲ್ಲಿ ಅಪಾರ ಪ್ರಮಾಣದ ಯುವಜನರು ಭಾಗವಹಿಸಿ ಓಕುಳಿ ರಂಗನ್ನು ಹೆಚ್ಚಿಸಿದರು. ರೇನ್ ಡ್ಯಾನ್ಸ್‌ನಲ್ಲಿ ಅಪ್ಪು ಅಭಿಮಾನಿಗಳು ಅಪ್ಪುವಿನ ಫೋಟೋ ಹಿಡಿದು ಡ್ಯಾನ್ಸ್ ಮಾಡಿದ್ದು ನೋಡಗರ ಗಮನ ಸೆಳೆಯಿತು.
ಓದಿ : ಹೋಳಿ ಹಬ್ಬದ ವೇಳೆ ಕಲಬುರಗಿ ಎಸ್ಪಿ ಇಶಾ ಪಂತ್ ಭರ್ಜರಿ ಡ್ಯಾನ್ಸ್- ವಿಡಿಯೋ