ಬಾಗಲಕೋಟೆ: ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣೆ ವತಿಯಿಂದ ವಿಶ್ವ ಪಾರಂಪರಿಕ ಸಪ್ತಾಹ ಅಂಗವಾಗಿ ಐಹೊಳೆ ಪ್ರವಾಸಿ ತಾಣದಲ್ಲಿ ಹಮ್ಮಿಕೊಂಡ ಪಾರಂಪರಿಕ ಬೈಕ್ ಜಾಥಾಕ್ಕೆ ಬುಧವಾರ ವಿದೇಶಿ ಪ್ರವಾಸಿಗರು ಚಾಲನೆ ನೀಡಿದರು.
![bkt](https://etvbharatimages.akamaized.net/etvbharat/prod-images/kn-bgk-02-historical-rally-av-script-7202182_20112019183938_2011f_1574255378_780.jpg)
ಬೈಕ್ಜಾಥಾವು ಐಹೊಳೆಯ ಕೇಂದ್ರಿಯ ಸಂರಕ್ಷಿತ ಸ್ಮಾರಕಗಳ (ದುರ್ಗಾದೇವಾಲಯ) ಆವರಣದಿಂದ ಪ್ರಾರಂಭವಾಗಿ ಪಟ್ಟದಕಲ್ಲು ಮಾರ್ಗವಾಗಿ ನಂದಿಕೇಶ್ವರ ಗ್ರಾಮದಲ್ಲಿ ಮುಕ್ತಾಯಗೊಂಡಿತು. ನಂತರ ನಂದಿಕೇಶ್ವರ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೊಂದಿಗೆ ಪರಂಪರೆ ಹಾಗೂ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಪರಂಪರೆ ಪ್ರಾಚೀನ ಸ್ಮಾರಕಗಳು ಮತ್ತು ಇತಿಹಾಸ ಕುರಿತಂತೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಧಾರವಾಡ ವಿಭಾಗದ ಪುರಾತತ್ವ ಇಲಾಖೆಯ ಅಧೀಕ್ಷಕ ಎ.ಅನಿಲಕುಮಾರ, ಅಧೀಕ್ಷಕ ಪುರಾತತ್ವ ಅಭಿಯಂತರ ಜಿ.ಕಾಮರಾಜ, ಸಹಾಯಕ ಪುರಾತತ್ವ ಅಭಿಯಂತರ ತೇಜಸ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.