ಬಾಗಲಕೋಟೆ: ಕಳೆದ ಫೆಬ್ರವರಿಯಿಂದ ಸಂಪೂರ್ಣ ಬತ್ತಿ ಹೋಗಿದ್ದ ರಬಕವಿ-ಬನಹಟ್ಟಿ ನಗರ ಸಮೀಪ ಇರುವ ಮಹಿಷವಾಡಗಿ ಬ್ಯಾರೇಜ್ ತುಂಬಿ ಹರಿಯುತ್ತಿದೆ. ಇದನ್ನು ಕಣ್ತುಂಬಿಸಿಕೊಳ್ಳಲು ಜನ ಸಾಗರವೇ ಹರಿದು ಬಂದಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಹಿನ್ನಲೆ ಕೃಷ್ಣೆಗೆ ನೀರು ಹರಿಸಿದ್ದರಿಂದ ಹಿಪ್ಪರಗಿ ಜಲಾಶಯದತ್ತ ನೀರು ಸಾಗುತ್ತಿದೆ. ರಾಜಾಪುರ ಜಲಾಶಯದಿಂದ 1 ಸಾವಿರ ಕ್ಯುಸೆಕ್ಸ್ ಪ್ರಮಾಣದಲ್ಲಿ ನೀರಿನ ಹರಿವಿದ್ದು, ಇಂದು ಹಿಪ್ಪರಗಿ ಜಲಾಶಯ ತಲುಪಲಿದೆ. ಇನ್ನೂ ನೀರಿನ ಬವಣೆಯಿಂದ ತತ್ತರಿಸಿ ಹೋಗಿದ್ದ ಜನತೆ ತಂಡೋಪತಂಡವಾಗಿ ಕೃಷ್ಣೆಯತ್ತ ಬಂದು ನದಿಯಲ್ಲಿನ ನೀರನ್ನು ನೋಡಿ ಸಂತಸದ ಛಾಯೆ ಹೊತ್ತು ವಾಪಸ್ ನಗರದತ್ತ ತೆರಳುತ್ತಿದ್ದರು.
ಇಂದಿನಿಂದ ಬನಹಟ್ಟಿಗೆ ನೀರು:
ಕೃಷ್ಣಾ ನದಿಯ ಮಹಿಷವಾಡಗಿ ಬ್ಯಾರೇಜ್‍ಗೆ ನೀರು ಹರಿದು ಬಂದ ಹಿನ್ನಲೆಯಲ್ಲಿ ಬನಹಟ್ಟಿ ಪಟ್ಟಣಕ್ಕೆ ನೀರು ಪೂರೈಕೆಯಾಗಲಿದೆ ಎಂದು ಪೌರಾಯುಕ್ತ ಆರ್.ಎಂ. ಕೊಡಗೆ ತಿಳಿಸಿದರು. ರಬಕವಿಯ ಜಾಕವೆಲ್ ಇನ್ನೆರಡು ದಿನಗಳಲ್ಲಿ ಪ್ರಾರಂಭಗೊಂಡು ರಬಕವಿ-ಹೊಸೂರ ಹಾಗು ರಾಮಪೂರ ಪಟ್ಟಣಗಳಿಗೂ ಬಹುತೇಕ ಸೋಮವಾರದಿಂದ ನೀರು ಸರಬರಾಜು ಮಾಡಲಾಗುವುದು ಎಂದರು.
ಅಷ್ಟೇಅಲ್ಲದೆ, ಹಿಡಿದಿಟ್ಟ ನೀರು ಬಂದಿದ್ದು, ನದಿಯಲ್ಲಿನ ನೀರು ಕಲ್ಮಶವಾಗಿದೆ. ಹೀಗಾಗಿ ನೀರನ್ನು ಚನ್ನಾಗಿ ಕಾಯಿಸಿ, ಸೋಸಿ ಕುಡಿಯಬೇಕು. ನೀರನ್ನು ಮಿತವಾಗಿ ಬಳಕೆ ಮಾಡಿದಲ್ಲಿ ಸದ್ಯದ ಮಟ್ಟಿಗಿನ ಹಾಹಾಕಾರವನ್ನು ತಪ್ಪಿಸಬಹುದು ಎಂದು ಪೌರಾಯುಕ್ತರು ಮನವಿ ಜೊತೆಗೆ ಕಿವಿಮಾತನ್ನಾಡಿದರು.