ಬಾಗಲಕೋಟೆ : ಕಳ್ಳತನ ಮಾಡಲು ಬಂದಿದ್ದಾನೆ ಎಂದು ಯುವಕನೊಬ್ಬನನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಇಲಕಲ್ಲ ತಾಲೂಕಿನ ಗುಡೂರ ಗ್ರಾಮದಲ್ಲಿ ಮಧ್ಯರಾತ್ರಿ ಜರುಗಿದೆ.
ಬೊಲೆರೋ ವಾಹನ ಮೂಲಕ ಆಗಮಿಸಿದ ಐದು ಜನರ ತಂಡ, ಹುನಗುಂದ ಹೋಗುವ ರಸ್ತೆಯ ಮನೆಯೊಂದರಲ್ಲಿ ಕಳ್ಳತನ ಮಾಡುವ ಯತ್ನ ನಡೆಸಿತ್ತು ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯ ಯುವಕನಿಗೆ ಮಾಹಿತಿ ಗೊತ್ತಾದದ್ದು ಗಮನಕ್ಕೆ ಬಂದ ಕೂಡಲೇ ಬೊಲೆರೋ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ.
ಆದ್ರೆ, ಈ ವೇಳೆ ಓರ್ವ ಮಾತ್ರ ಸಿಕ್ಕಿ ಬಿದ್ದಿದ್ದು, ಅವನನ್ನು ಕಂಬಕ್ಕೆ ಕಟ್ಟಿ ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಮೀನಗಢ ಪೊಲೀಸ್ ಠಾಣೆಗೆ ಆರೋಪಿಯನ್ನು ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗಿದೆ. ಗದಗ ಜಿಲ್ಲೆಯವನಾದ ಈ ಆರೋಪಿಯು ಕಾಡು ಹಂದಿಯನ್ನು ಬೇಟೆ ಆಡಲು ತಂಡದೊಂದಿಗೆ ಬಂದಿದ್ದಾಗಿ ಪೊಲೀಸರ ಬಳಿ ಹೇಳಿದ್ದಾರೆ.
ಈ ಸಮಯದಲ್ಲಿ ಗ್ರಾಮಸ್ಥರು ಕಳ್ಳರು ಎಂದು ಭಾವಿಸಿ ಹಿಡಿಯಲು ಯತ್ನ ನಡೆಸಿದ್ದಾರೆ. ಓರ್ವ ಆರೋಪಿ ಮಾತ್ರ ಸಿಕ್ಕಿದ್ದು,ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ಬಗ್ಗೆ ಗದಗ ಜಿಲ್ಲಾ ಪೊಲೀಸ್ ಇಲಾಖೆ ಈತನ ಬಗ್ಗೆ ವಿಚಾರಣೆ ನಡೆಸಿ, ಇತರ ಪ್ರಕರಣದಲ್ಲಿ ಭಾಗಿ ಆಗಿದ್ದರೆ, ಗದಗ ಜಿಲ್ಲಾ ಪೊಲೀಸರಿಗೆ ಒಪ್ಪಿಸಲಾಗುವುದು ಎಂದು ಅಮೀನಗಢ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
ಆದರೆ, ಇತ್ತೀಚೆಗೆ ಕುರಿ, ಆಡು, ಬೈಕ್ ಸೇರಿದಂತೆ ಇತರ ವಸ್ತುಗಳು ಗ್ರಾಮದಲ್ಲಿ ಕಳ್ಳತನವಾಗಿವೆ. ಈತನ ಮೇಲೆ ಅನುಮಾನವಿದೆ ಎಂದು ಗ್ರಾಮಸ್ಥರು ಹೇಳಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.