ಬಾಗಲಕೋಟೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿಯರಿಗೆ ವಿತರಿಸುವ ಆಹಾರ ಧಾನ್ಯಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆಹಾರ ಇಲಾಖೆ ಸಚಿವ ಉಮೇಶ ಕತ್ತಿ ಉಸ್ತುವಾರಿ ಹೊತ್ತಿರುವ ಜಿಲ್ಲೆಯಲ್ಲಿಯೇ ಪ್ಲಾಸ್ಟಿಕ್ ಅಕ್ಕಿ ಪತ್ತೆ ಆಗಿರುವ ಆರೋಪ ಕೇಳಿಬಂದಿದೆ.
ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದ ವೆಂಕಟೇಶ್ವರ ನಗರದ ಅಂಗವಾಡಿ ಕೇಂದ್ರದಿಂದ ಆಹಾರ ಧಾನ್ಯ ವಿತರಣೆ ಮಾಡಲಾಗಿತ್ತು. ಗರ್ಭಿಣಿಯರಿಗೆ ಹಾಗೂ ಅಪೌಷ್ಟಿಕತೆ ಇರುವ ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ಆಹಾರ ವಿತರಣೆ ಮಾಡಲಾಗುತ್ತದೆ. ಆದರೆ ಅಂಗನವಾಡಿ ಕೇಂದ್ರದ ಮೂಲಕವೇ ರಬ್ಬರ್ ಮಾದರಿಯ, ಪ್ಲಾಸ್ಟಿಕ್ ಮಿಶ್ರಿತ ಅಕ್ಕಿ ಬಂದಿವೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಬಿಜೆಪಿಯವರು ಹುನ್ನಾರ ನಡೆಸುತ್ತಿದ್ದಾರೆ: ಆರ್.ಧ್ರುವನಾರಾಯಣ್
ಅಂಗನವಾಡಿ ಕೇಂದ್ರದಿಂದ ಆಹಾರ ಪಡೆದವರು ಮನೆಗೆ ಬಂದು ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿವೆ ಎನ್ನಲಾಗ್ತಿದೆ. ಉತ್ತಮ ಆರೋಗ್ಯಕ್ಕಾಗಿ ಕೂಡಮಾಡುವ ಆಹಾರವು, ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಆಹಾರ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರಾ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.