ಬಾಗಲಕೋಟೆ: ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ ಮಾರುತೇಶ್ವರನ ಜಾತ್ರೆ ಅದ್ಧೂರಿಯಾಗಿ ನಡೆಯಿತು. ಐತಿಹಾಸಿಕ ಹಿನ್ನೆಲೆಯುಳ್ಳ ಜಾತ್ರೆಯಲ್ಲಿ ಸಾವಿರಾರು ಭಕ್ತರು ತೆಂಗಿನಕಾಯಿ ತೂರುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು. ಇಲ್ಲಿನ ಆಂಜನೇಯ ದೇವಾಲಯದಲ್ಲಿ ಸಂಜೆಯ ದೇವರ ಪಲ್ಲಕಿ ಉತ್ಸವದ ಬಳಿಕ ಸಾವಿರಾರು ಭಕ್ತರು ದೇವಸ್ಥಾನ ಗೋಪುರದ ಮೇಲೆ ತೆಂಗಿನಕಾಯಿಗಳನ್ನು ತೂರಿದರು.
ದೇವರ ಪಲ್ಲಕ್ಕಿ ಸಂಜೆ ವೇಳೆ ಗ್ರಾಮದಲ್ಲಿ ಮೆರವಣಿಗೆ ಸಾಗಿ ಮರಳಿ ದೇವಸ್ಥಾನಕ್ಕೆ ತಲುಪಿತು. ದೇವಸ್ಥಾನವನ್ನು ಮೂರು ಸುತ್ತು ಸುತ್ತಿದ ಬಳಿಕ ದೇವಸ್ಥಾನದ ಸುತ್ತಲು ನೆರೆದಿದ್ದ ಭಕ್ತರ ಸಮೂಹ ದೇವಸ್ಥಾನ ಗೋಪುರದ ಮೇಲೆ ತೆಂಗಿನಕಾಯಿಗಳನ್ನು ತೂರಿದರು. ಕೆಳಗೆ ಬೀಳುವ ತೆಂಗಿನಕಾಯಿಯನ್ನು ಹಿಡಿದುಕೊಳ್ಳುವುದಕ್ಕೆ ಕೆಲ ಭಕ್ತರು ನಿಂತಿದ್ದರು. ಭಕ್ತರಿಗೆ ಅಪಾಯವಾಗದಂತೆ ಗೋಪುರ ಸುತ್ತ ಜಾಳಿಗೆ ಕಟ್ಟಲಾಗಿತ್ತು. ಭಕ್ತರು ತಮ್ಮ ಇಷ್ಟಾರ್ಥನಿದ್ಧಿಗೆ ಆಂಜನೇಯನಲ್ಲಿ ಪ್ರಾರ್ಥಿಸಿ, ಜಾತ್ರೆಯಲ್ಲಿ ಇಂತಿಷ್ಟು ತೆಂಗಿನಕಾಯಿ ತೂರುತ್ತೇವೆ ಎಂದು ಹರಕೆ ಮಾಡಿಕೊಳ್ಳುತ್ತಾರೆ. ತಮ್ಮ ಇಷ್ಟಾರ್ಥ ಈಡೇರಿದ ನಂತರ ಭಕ್ತರು ಜಾತ್ರೆಗೆ ಬಂದು 5, 11, 21 ಅಥವಾ 101 ತೆಂಗಿನಕಾಯಿಗಳ್ನು ತೂರುತ್ತಾರೆ.
ಸ್ಥಳೀಯರಾದ ಕೆ ಎಸ್ ದೇಶಪಾಂಡೆ ಮಾತನಾಡಿ, "ಇದು ಸೂಳಿಕೇರಿಯ ಹನುಮಂತನ ಕಾರ್ತಿಕೋತ್ಸವ. ಇಲ್ಲಿನ ವಿಶೇಷತೆ ಏನೆಂದರೆ ದೇವರಿಗೆ ಪಲ್ಲಕ್ಕಿಯ ಸೇವೆ ಮುಗಿದ ನಂತರ ಭಕ್ತರು ತೆಂಗಿನಕಾಯಿ ತೂರುತ್ತಾರೆ. ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂಬ ಉದ್ದೇಶದಿಂದ ಇಲ್ಲಿ ಈ ವಿಶೇಷ ಆಚರಣೆಯನ್ನು ಮಾಡಲಾಗುತ್ತದೆ. ಈ ಆಚರಣೆಗೆ ನೂರಾರು ವರ್ಷಗಳ ಇತಿಹಾಸ ಇದೆ" ಎಂದರು.
ಭಕ್ತರಾದ ಮಹಾದೇವಪ್ಪ ಮಾತನಾಡಿ, "ಇಲ್ಲಿನ ಜಾತ್ರೆಯಲ್ಲಿ ತೆಂಗಿನಕಾಯಿಯನ್ನು ತೂರಲಾಗುತ್ತಿದ್ದು, ತೆಂಗಿನಕಾಯಿ ಬಲ ಭಾಗದಲ್ಲಿ ಬಿದ್ದರೆ ಶುಭವಾಗುತ್ತದೆ ಎಂದು, ಎಡ ಭಾಗದಲ್ಲಿ ಬಿದ್ದರೆ ಸಂಕಷ್ಟ ಎಂದು ಭಕ್ತರು ನಂಬುತ್ತಾರೆ. ಇದೊಂದು ವಿಶೇಷ ಆಚರಣೆಯಾಗಿದೆ. ನಾನು ಬೆಂಗಳೂರಿನಿಂದ ಹನುಮಂತನ ಕಾರ್ತಿಕೋತ್ಸವಕ್ಕೆ ಬಂದಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ: ಬಸವನ ಬಾಗೇವಾಡಿಯಲ್ಲಿ ಗೌರಿಶಂಕರ ದೇವಸ್ಥಾನದ ಅದ್ಧೂರಿ ಜಾತ್ರೆ