ಬಾಗಲಕೋಟೆ: ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗಳಿಗೆ ನೇಮಕಾತಿಗೆ ಇಂದು ಪರೀಕ್ಷೆ ನಿಗದಿಯಾಗಿತ್ತು. ಆದರೆ ಪರೀಕ್ಷಾ ಕೇಂದ್ರದ ಕೊಠಡಿಗಳ ಬೀಗದ ಕೀ ಇಲ್ಲದೇ ಪರದಾಡುವಂತಾಗಿತ್ತು. ಕೊನೆಗೆ ಕಲ್ಲಿನಿಂದ ಬೀಗ ಒಡೆದು ವಿದ್ಯಾರ್ಥಿಗಳು ಕೊಠಡಿ ಪ್ರವೇಶಿಸಿರುವ ಘಟನೆ ಜಿಲ್ಲೆಯ ಇಲಕಲ್ಲ ಪಟ್ಟಣದಲ್ಲಿ ನಡೆದಿದೆ.
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ಗೆ ಪರೀಕ್ಷೆ ಬರೆಯಲು ನೂರಾರು ವಿದ್ಯಾರ್ಥಿಗಳು ಬಂದಿದ್ದರು. ಆದರೆ ಸಂಬಂಧಪಟ್ಟ ಸಿಬ್ಬಂದಿ ಸ್ಥಳಕ್ಕೆ ಬೇಗನೆ ಬಂದಿರಲಿಲ್ಲ. ನಂತರ ಆಗಮಿಸಿದ ಅವರು, ಪರೀಕ್ಷೆ ಕೊಠಡಿಗಳ ಬೀಗದ ಕೀಯನ್ನು ಕಾಲೇಜು ಸಿಬ್ಬಂದಿ ಕಳೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ಪಾಲಕರು ಕಲ್ಲಿನಿಂದ ಜಜ್ಜಿ ಬೀಗ ಒಡೆದು ಕದ ತೆರೆದರು. ನಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಟ್ಟರು.
ಬೆಳಗ್ಗೆ 10:30ಕ್ಕೆ ನಡೆಯಬೇಕಾಗಿದ್ದ ಪರೀಕ್ಷೆಗೆ 10 ಗಂಟೆಯಾದರೂ ಸಂಬಂಧಪಟ್ಟ ಅಧಿಕಾರಿಗಳು ಬಂದಿರಲಿಲ್ಲ. ಆದರೆ 9 ಗಂಟೆಗೆ ಬಾಗಲಕೋಟೆ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಪಾಲಕರು ಹಾಗೂ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರಕ್ಕೆ ಆಗಮಿಸಿದ್ದಾರೆ. ಕೆಪಿಟಿಸಿಎಲ್ ಅಧಿಕಾರಿಗಳು ಹಾಗೂ ಕಾಲೇಜ್ ಸಿಬ್ಬಂದಿ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚೆಲ್ಲಾಟ ಆಡಿದ್ದಾರೆಂದು ಆರೋಪಿಸಿದರು. ನಂತರ ಅಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದು, ಪಾಲಕರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಹೊತ್ತು ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.
ಇದನ್ನೂ ಓದಿ: ಮನೆ ಮನೆಗೆ ತೆರಳಿ ತಿರಂಗ ಹಂಚಿದ ದಾವಣಗೆರೆ ಮಾಜಿ ಮೇಯರ್