ಬಾಗಲಕೋಟೆ: ಬಾದಾಮಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೈ ಎತ್ತುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದರು. ಜನವರಿ 24 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜ ಮಹಮ್ಮದ್ ಬಾಗವಾನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾವಿತ್ರವ್ವ ಕಾಗೆ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿಯಿಂದ ಬಸವರಾಜ ಎಂಬುವವರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಶಶಿಕಲಾ ಎಂಬುವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ನೀಡಿದ್ದರು. ಚುನಾವಣೆ ಅಧಿಕಾರಿ ಸುಹಾಸ ಇಂಗಳೆ ಅವರು ಕೈ ಎತ್ತುವ ಮೂಲಕ ಮತದಾನ ನಡೆಸಿದರು. ಒಟ್ಟು 23 ಸದಸ್ಯರಲ್ಲಿ ಶಾಸಕ ಸಿದ್ದರಾಮಯ್ಯ ಸೇರಿ 14 ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರೆ, ಉಳಿದ 10 ಜನರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದರು. ನಾಲ್ಕು ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಅಧಿಕಾರ ಮುಂದುವರೆಯಿತು. ನಿರೀಕ್ಷೆ ಮಾಡಿದಂತೆ ರಾಜ ಮಹಮ್ಮದ್ ಬಾಗವಾನ ಅಧ್ಯಕ್ಷ ಹುದ್ದೆ ಅಲಂಕರಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಜೆಡಿಎಸ್, ಬಿಜೆಪಿ ಶಾಸಕರು ಸಂಪರ್ಕದಲ್ಲಿರುವುದು ನಿಜ: ಈ ಸಂದರ್ಭದಲ್ಲಿ, ಜೆಡಿಎಸ್, ಬಿಜೆಪಿ ಶಾಸಕರು ಕಾಂಗ್ರೆಸ್ನೊಂದಿಗೆ ಸಂಪರ್ಕ ಇರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರೆಲ್ಲ ಸಂಪರ್ಕದಲ್ಲಿರುವುದು ನಿಜ. ಆದರೆ ಹೆಸರು ಮಾತ್ರ ಹೇಳಲ್ಲ ಎಂದರು.
ಟೀಕೆಗಳನ್ನ ಸಹಿಸಿಕೊಳ್ಳಬೇಕು: ಸಿದ್ದರಾಮಯ್ಯ ಮೇಲೆ ಎಚ್ಡಿಕೆ ಕೋಪ ವಿಚಾರವಾಗಿ ಪ್ರತಿಕ್ರಿಸುತ್ತಾ ನನಗೆ ಗೊತ್ತಿಲ್ಲ. ಅವರಿಗೆ ಯಾವಾಗ ಕೋಪ ಬರತ್ತೋ, ಯಾವಾಗ ಇಳಿಯುತ್ತೋ ಯಾರಿಗೆ ಗೊತ್ತು. ನನಗಂತೂ ಕೋಪ ಬರಲ್ಲ. ಪ್ರಜಾಪ್ರಭುತ್ವದಲ್ಲಿ ಟೀಕೆಗಳನ್ನ ಸಹಿಸಿಕೊಳ್ಳಬೇಕು. ಟೀಕೆ ಸಹಿಸಿಕೊಂಡರೆ ಮಾತ್ರ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಬರುವುದು ಎಂದರು.
ದೇಶದ ಆಸ್ತಿ ಯಾರ ಅಪ್ಪನ ಮನೆ ಸ್ವತ್ತಲ್ಲ: ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದೇವೆ. ಈ ರಾಜ್ಯದ, ದೇಶದ ಆಸ್ತಿ ಯಾರ ಅಪ್ಪನ ಮನೆ ಸ್ವತ್ತಲ್ಲ. ನಮ್ಮ ಮನೆ ಆಸ್ತಿಯೂ ಅಲ್ಲ, ಅವರ ಅಪ್ಪನ ಮನೆ ಆಸ್ತಿಯೂ ಅಲ್ಲ. ಜನರ ಆಸ್ತಿ. ಪಾಪ ಅವರಿಗೆ ಅಷ್ಟು ಸಾಮಾನ್ಯ ಜ್ಞಾನ ಇಲ್ಲ ಅಂದ್ರೆ ನಾನೇನು ಮಾಡೋಕೆ ಆಗುತ್ತದೆ ಎಂದು ತುಮಕೂರು ಸಿದ್ದರಾಮಯ್ಯ ಅಪ್ಪನ ಮನೆ ಆಸ್ತಿನಾ? ಎಂದಿದ್ದ ಕುಮಾರಸ್ವಾಮಿಗೆ ಟಾಂಗ್ ನೀಡಿದರು.
ಜೆಡಿಎಸ್ ಓಡಿಸಿ ಅಂತಾ ನಾನು ನಮ್ಮ ಕಾರ್ಯಕರ್ತರಿಗೆ ಹೇಳಿದ್ದು. ನನ್ನ ಕಾರ್ಯಕರ್ತರಿಗೆ ಹೇಳಲು ನನಗೆ ಹಕ್ಕಿಲ್ವಾ?. ಅದಕ್ಕೆ, ಸಿದ್ದರಾಮಯ್ಯ ಅಪ್ಪನ ಆಸ್ತಿನಾ ಅಂದ್ರೆ?. ಜನರ ಆಸ್ತಿ. ನಾವೆಲ್ಲ ಜನರ ಶ್ರಮದ ಮೇಲೆ ಬದುಕಿರುವವರು ಎಂದರು.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೆ ಗೊತ್ತಿಲ್ಲಪ್ಪ. ಯತ್ನಾಳ್ ಏನ್ ಮಾತಾಡ್ತಾನೆ ಅಂತಾ ಅವನಿಗೆ ಗೊತ್ತಿರಲ್ಲ ಪಾಪ. ಅದಕ್ಕೆಲ್ಲ ನಾವ್ ಉತ್ತರ ಕೊಡೋಕೆ ಆಗಲ್ಲ ಎಂದು ವ್ಯಂಗ್ಯವಾಡಿದರು.
ಪಿಎಸ್ಐಗೆ ತರಾಟೆ: ಈ ಮೊದಲು ಖಾಸಗಿ ಹೋಟೆಲ್ನಲ್ಲಿ ಊಟಕ್ಕೆ ಹೋದ ಸಮಯದಲ್ಲಿ, ಬಾದಾಮಿ ಪಿಎಸ್ಐ ನೇತ್ರಾವತಿ ಪಾಟೀಲ ಅವರಿಗೆ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡ ಘಟನೆ ನಡೆಯಿತು. ಏನಮ್ಮಾ? ಯಾರಾದರು ಫೋನ್ ಮಾಡಿದ್ರೆ ನೀನು ಫೋನ್ ತೆಗೆಯುವುದಿಲ್ಲವೇ. ನಿಮಗೆ ಫೋನ್ ಕೊಟ್ಟಿರುವುದು ಯಾಕೆ? ಎಂದು ಪ್ರಶ್ನಿಸಿದ ಅವರು, ಯಾರೇ ಫೋನ್ ಮಾಡಿದರೂ, ತಕ್ಷಣ ಎತ್ತಬೇಕು. ಅವರ ಸಮಸ್ಯೆ ಕೇಳಬೇಕು. ಕಾನೂನು ಪ್ರಕಾರ ಎಲ್ಲ ಮಾಡಬೇಕು ಎಂದು ಪಿಎಸ್ಐಗೆ ಬುದ್ದಿ ಮಾತು ಹೇಳಿದರು.
ಬಾದಾಮಿಯಲ್ಲಿ ವಾಸ್ತವ್ಯ ಇರುವ ಹಿನ್ನೆಲೆ ಸೋಮವಾರ ರಾತ್ರಿ ಬನಶಂಕರಿ ದೇವಿ ದರ್ಶನ ಪಡೆದರು. ದೇವಾಲಯಕ್ಕೆ, ಬೆಂಬಲಿಗರ ಜತೆ ಆಗಮಿಸಿ ಪೂಜೆ ಸಲ್ಲಿಸಿದರು. ಈ ಬಾರಿಯೂ ಕೋವಿಡ್ ಹಿನ್ನೆಲೆ ಜಾತ್ರೆ ರದ್ದು ಮಾಡಿ ಅಂಗಡಿ ಮುಂಗಟ್ಟು ತೆರೆಯಲು ನಿಷೇಧ ಹೇರಲಾಗಿದೆ. ಕಳೆದ 2 ವರ್ಷದಿಂದ ವ್ಯಾಪಾರ ಇಲ್ಲದೇ ಸಂಕಷ್ಟ ಎದುರಿಸಿದ್ದೇವೆ. ಸದ್ಯ ಅಂಗಡಿ-ಮುಂಗಟ್ಟು ಆರಂಭಿಸಲು ಅನುಮತಿ ಕೊಡಿಸುವಂತೆ ಸಿದ್ದರಾಮಯ್ಯಗೆ ವ್ಯಾಪಾರಸ್ಥ ಮಹಿಳೆಯರು ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.
ಇದನ್ನೂ ಓದಿ: ಸೇತುವೆ ಮೇಲಿಂದ 50 ಅಡಿ ಕೆಳಗೆ ಬಿದ್ದ ಕಾರು.. ಶಾಸಕನ ಮಗ ಸೇರಿ ಏಳು ವೈದ್ಯಕೀಯ ವಿದ್ಯಾರ್ಥಿಗಳು ದಾರುಣ ಸಾವು!