ಬಾಗಲಕೋಟೆ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಮತ್ತೊಂದೆಡೆ, ಬಾಗಲಕೋಟೆ ಜಿಲ್ಲೆಯ ಸೀತಿಮನಿ ಎಂಬ ಗ್ರಾಮದಲ್ಲಿರುವ ಸೀತಾ ಮಂದಿರ ಮತ್ತು ಮಹಿರ್ಷಿ ವಾಲ್ಮೀಕಿ ಮಂದಿರ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ದೇಶಾದ್ಯಂತ ರಾಮಮಂದಿರಗಳನ್ನು ಕಾಣಬಹುದು. ಆದರೆ, ಸೀತಾಮಾತೆಗೆ ಪ್ರತ್ಯೇಕ ದೇವಾಲಯ ಇರುವುದು ಇಲ್ಲಿನ ವಿಶೇಷವಾಗಿದೆ. ಈ ಮಂದಿರ ಬಾಗಲಕೋಟೆ ನಗರದಿಂದ ಆಲಮಟ್ಟಿಗೆ ಹೋಗುವ ಮಾರ್ಗ ಮಧ್ಯೆ ಸುಮಾರು 45 ಕೀ.ಮೀ. ದೂರದಲ್ಲಿ ಇದೆ.
ದೇವಸ್ಥಾನದ ಅರ್ಚಕ ಮಡಿವಾಳಯ್ಯ ಹಿರೇಮಠ ಮಾತನಾಡಿ, "ಸೀತಾಮಾತೆಯನ್ನು ರಾವಣ ಅಪಹರಿಸಿದ್ದಾಗ ಇದೇ ಮಾರ್ಗವಾಗಿ ಕರೆದುಕೊಂಡು ಹೋಗಿದ್ದನಂತೆ. ಈ ವೇಳೆ, ಸೀತಾಮಾತೆ ತನ್ನ ಕೊರಳಲ್ಲಿರುವ ಕರಿಮಣಿಯನ್ನು ಇದೇ ಜಾಗದಲ್ಲಿ ಎಸೆದಿದ್ದರು. ಇಲ್ಲಿ ಕರಿಮಣಿ ಬಿದ್ದಿದ್ದರಿಂದ ಈ ಗ್ರಾಮಕ್ಕೆ ಸೀತಿಮನಿ ಎಂಬ ಹೆಸರು ಬಂತು. ಕೆಲವು ವರ್ಷಗಳ ಬಳಿಕ ಸೀತಾಮಾತೆಯನ್ನು ಅಯೋಧ್ಯೆಗೆ ಮರಳಿ ಕರೆದುಕೊಂಡು ಹೋದರು. ಬಳಿಕ ಶ್ರೀ ರಾಮ ಪ್ರಜೆಯೊಬ್ಬನ ಮಾತಿನಿಂದ ನೊಂದು ಸೀತಾಮಾತೆಯನ್ನು ಕಾಡಿಗೆ ಬಿಟ್ಟು ಬರುವಂತೆ ಲಕ್ಷ್ಮಣನಿಗೆ ಆದೇಶಿಸುತ್ತಾನೆ" ಎಂದು ಹೇಳಿದರು.
"ಇಲ್ಲಿ ಹೊಳೆ ತುಂಬಿ ಹರಿಯುತ್ತಿದ್ದಿದ್ದರಿಂದ ಹೊಳೆ ದಾಟಲಾಗದೇ ಲಕ್ಷ್ಮಣ ಸೀತಾಮಾತೆಯನ್ನು ಇಲ್ಲಿಯೇ ಬಿಟ್ಟು ಹೋದ. ಆಗ ವಾಲ್ಮೀಕಿ ಮಹರ್ಷಿಗಳು ತುಂಬು ಗರ್ಭಿಣಿಯಾಗಿದ್ದ ಸೀತಾಮಾತೆಯನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಬಂದು ಜೋಪಾನ ಮಾಡಿದರು. ಇಲ್ಲಿನ ಸೀತಾಮಾತೆಗೆ ಲವಕುಶ ಎಂಬ ಮಕ್ಕಳು ಹುಟ್ಟಿದರು. ಇಲ್ಲಿಂದ ಮರಳಿ ಹೋಗುವಾಗ ಇಲ್ಲಿ ಸೀತಾಮಾತೆಯ ಮೂರ್ತಿ ಉದ್ಭವವಾಯಿತು. ಸೀತಾಮಾತೆ ಒಬ್ಬಳೇ ಇರುವ ದೇಶದ ಏಕೈಕ ದೇವಸ್ಥಾನ ಸೀತಿಮನಿ ಗ್ರಾಮದಲ್ಲಿದೆ. ವಂಶಪಾರಂಪರ್ಯವಾಗಿ ನಾನು ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದೇನೆ" ಎಂದರು.
"ಲವ-ಕುಶಗೆ ಸ್ನಾನ ಮಾಡಿಸಿದ್ದರ ಪ್ರತೀಕವಾಗಿ ಲವ-ಕುಶ ಹೆಸರಿನಲ್ಲಿ ಹೊಂಡಗಳು ಸಹ ಇವೆ. ಇದರ ಜೊತೆಗೆ ಇಲ್ಲಿ ವಾಲ್ಮೀಕಿ ಮಹರ್ಷಿಗಳ ಮಂದಿರ ಸಹ ಇದೆ. ಸೀತಾಮಾತೆ ಬಾಣಂತಿ ಇದ್ದಾಗ ಸ್ನಾನ ಮಾಡಲು ನಿರ್ಮಿಸಿದ್ದ ಹೊಂಡ ಇದೆ. ಇಲ್ಲಿರುವ ಹೊಂಡದಲ್ಲಿ ಎಂತಹ ಬೇಸಿಗೆ, ಬರಗಾಲ ಇದ್ದರೂ ನೀರು ಕಡಿಮೆ ಆಗಲ್ಲ. ಎಲ್ಲ ಋತಮಾನದಲ್ಲಿ ನೀರು ಇರುತ್ತದೆ. ಹೊಂಡಗಳಲ್ಲಿ ನೀರು ಬತ್ತಿರುವ ಇತಿಹಾಸವೇ ಇಲ್ಲ. ಸೀತಾಮಾತೆ ಮಂದಿರ ಜೊತೆಗೆ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಾಲಯ ಸಹ ಇದ್ದು, ಪ್ರತಿ ವರ್ಷ ದಸರಾ ಹಬ್ಬದಲ್ಲಿ ಒಂಬತ್ತು ದಿನಗಳ ಕಾಲ ಪೂಜೆ - ಪುನಸ್ಕಾರ ನಡೆಯುತ್ತದೆ" ಎಂದು ತಿಳಿಸಿದರು. ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ದಿನ ಸೀತಾಮಾತೆ ಮಂದಿರದಲ್ಲಿ ವಿಶೇಷ ಪೂಜೆ - ಪುನಸ್ಕಾರಗಳು ನಡೆಯಲಿವೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಕುಸುರಿ ಕೆಲಸದಲ್ಲಿ ರಾಯಚೂರಿನ ಯುವ ಶಿಲ್ಪಿ ವೀರೇಶ್