ಬಾಗಲಕೋಟೆ: ಜಿಲ್ಲೆಯ ಸಿದ್ದನಕೊಳ್ಳದ ಮಠದಿಂದ ಪ್ರತಿ ವರ್ಷ ನೀಡುವ ಸಿದ್ದಶ್ರೀ ಪ್ರಶಸ್ತಿಗೆ ಈ ಬಾರಿ ಚಲನಚಿತ್ರದ ಖ್ಯಾತ ನಿರ್ಮಾಪಕರಾದ ಆರ್.ವಿ.ಗುರುಪಾದಮ್ ಆಯ್ಕೆಯಾಗಿದ್ದು, 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗುರುಪಾದಮ್ ಅವರು, ಸಿದ್ದನಕೊಳ್ಳ ಸ್ವಾಮೀಜಿ 25 ಸಾವಿರ ರೂ. ನೀಡಿರುವುದು 25 ಸಾವಿರ ಕೋಟಿ ಎಂದು ಭಾವಿಸುತ್ತೇನೆ. ಈ ಮಠದಲ್ಲಿ ನಿರಂತರ ದಾಸೋಹ ಇರುವುದರಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ದಾಸೋಹ ಭವನ ನಿರ್ಮಾಣ ಮಾಡಿಕೊಡುತ್ತೇನೆ ಎಂದರು.
ನಾನು ಮೂಲತಃ ಹುಬ್ಬಳ್ಳಿ ನಿವಾಸಿಯಾಗಿದ್ದು, ಈಗ ಚೆನ್ನೈ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಇಲ್ಲಿಯವರೆಗೂ ರಾಜ್ಯ ಸರ್ಕಾರ ಕೂಡ ಗುರುತಿಸಿಲ್ಲ. ಇಲ್ಲಿನ ಡಾ.ಶಿವಕುಮಾರ ಸ್ವಾಮೀಜಿಯವರು ಗುರುತಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರ ಮಾತನಾಡಿ, ಈ ಮಠದ ಆಶೀರ್ವಾದ ಪಡೆದುಕೊಂಡು ರಾಜಕೀಯವಾಗಿ ಬೆಳೆದ ಯಾರೇ ವ್ಯಕ್ತಿಗಳಾಗಿ, ಸ್ವಾರ್ಥ ಸಾಧನೆ ಬಿಟ್ಟು ಎಲ್ಲರಿಗೂ ಅನುಕೂಲಕರ ರೀತಿಯಲ್ಲಿ ಕೆಲಸ ಮಾಡಬೇಕಿದೆ ಎಂದರು.
ಮಾಜಿ ಸಂಸದ ಐ.ಜಿ ಸನದಿ ಅವರು ಮಾತನಾಡಿ, ಎಲ್ಲ ದಾನಕ್ಕಿಂತ ಅನ್ನದಾನ ಶ್ರೇಷ್ಠವಾಗಿದೆ. ಹೀಗಾಗಿ ಇಲ್ಲಿ ನಿರಂತರ ದಾಸೋಹ ನಡೆಯುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.