ಬಾಗಲಕೋಟೆ: ಮಾಜಿ ಸಿ ಎಂ ಸಿದ್ದರಾಮಯ್ಯನವರು ನಾಳೆ ಬಾದಾಮಿ ಮತಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಂಡಿರುವುದು ಕುತೂಹಲ ಮೂಡಿಸಿದೆ. ಈಗಾಗಲೇ ಕೋಲಾರ ಮತಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಹೇಳಿಕೆ ನೀಡಿದ್ದ ಬೆನ್ನಲ್ಲೇ ವಿರೋಧ ವ್ಯಕ್ತವಾದ ಹಿನ್ನೆಲೆ ಮತ್ತೆ ಕ್ಷೇತ್ರದ ಹುಡುಕಾಟದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇದ್ದರು.
ಈ ಮಧ್ಯೆ ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಸುಮಾರು 500 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಜತೆಗೆ ಬಾದಾಮಿ ಪಟ್ಟಣದಲ್ಲಿ ರೋಡ್ ಶೋ ಹಮ್ಮಿಕೊಳ್ಳಲಿದ್ದಾರೆ. ಇದರಿಂದಾಗಿ ಮತ್ತೆ ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.
ಬೃಹತ್ ಸಮಾರಂಭದ ವೇದಿಕೆ ಸಿದ್ಧ: ಈ ಮಧ್ಯೆ ನಾಳೆ ಅವರ ಆಪ್ತ ವಲಯದಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಖಚಿತವಾಗಿ ಮಾಹಿತಿ ನೀಡಲಿದ್ದಾರೆ ಎಂದು ಸಹ ಹೇಳಲಾಗುತ್ತದೆ. ಕೆರೂರು ಪಟ್ಟಣದ ಕುಡಿಯುವ ನೀರಿನ ಯೋಜನೆ ಸೇರಿದಂತೆ ನಾಳೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬಾದಾಮಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಬೃಹತ್ ಸಮಾರಂಭದ ವೇದಿಕೆ ಸಿದ್ಧಗೊಂಡಿದೆ.
ನಾಳೆ ಸಿದ್ದರಾಮಯ್ಯ ರೋಡ್ ಶೋ: ಕ್ಷೇತ್ರದ ಶಾಸಕರು ಆಗಿರುವುದರಿಂದ ರೋಡ್ ಶೋ ಮಾಡಲು ಮುಂದಾಗಿರುವುದು ಮತ್ತೆ ಬಾದಾಮಿಯಿಂದ ಸ್ಪರ್ಧೆ ಮಾಡಬಹುದು ಎನ್ನುವುದು ಗರಿಗೆದರಿದೆ. ವರುಣಾ, ಕೋಲಾರ, ಕುಷ್ಟಗಿ ಬಳಿಕ ಬಾದಾಮಿಯಿಂದ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಅವರ ಆಪ್ತರ ಬಳಗ ಒತ್ತಾಯ ಮಾಡಿದೆ. ಆದರೆ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂದು ಸಿದ್ದರಾಮಯ್ಯ ಗೊಂದಲಮಯವಾಗಿದೆ. ಈ ಹಿನ್ನೆಲೆ ಶುಕ್ರವಾರ ನಡೆಯುವ ಬಾದಾಮಿ ಸಮಾವೇಶ ಹಾಗೂ ರೋಡ್ ಶೋ ಕುತೂಹಲ ಮೂಡಿಸಿದೆ.
ಬಾದಾಮಿ ಸಿದ್ದರಾಮಯ್ಯಗೆ ಪ್ಲಸ್: ಬೃಹತ್ ಸಮಾವೇಶ ಮೂಲಕ ಬಹಿರಂಗ ಭಾಷಣದಲ್ಲಿ ಯಾವ ಕ್ಷೇತ್ರ ಎಂಬುದು ಘೋಷಣೆ ಮಾಡುವ ಸಾಧ್ಯತೆ ಇದೆ. ಹಳೆಯ ಗಂಡನ ಪಾದವೇ ಗತಿ ಎಂಬಂತೆ ಸಿದ್ದರಾಮಯ್ಯ ರಾಜ್ಯದ ವಿವಿಧ ಕ್ಷೇತ್ರದ ಸಂಚರಿಸಿದ ಬಳಿಕ ಮತ್ತೆ ಬಾದಾಮಿ ಆಯ್ಕೆ ಮಾಡಬಹುದಾ ಎಂಬುದು ಚರ್ಚೆ ಆಗುತ್ತಿದೆ. ಈಗಾಗಲೇ ಬಾದಾಮಿ ಮತಕ್ಷೇತ್ರದಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದಾರೆ.ಅದರ ಜತೆಗೆ ಜಾತಿ ಲೆಕ್ಕಾಚಾರ ಹಾಕಿದಾಗಲೂ ಸಿದ್ದರಾಮಯ್ಯ ಪ್ಲಸ್ ಆಗಿದೆ.
ಹಿಂದಿನ ಚುನಾವಣೆ ಸಮಯದಲ್ಲಿ ಕೇವಲ ಒಂದು ತಿಂಗಳಿನಲ್ಲಿ ಅಂತಿಮವಾಗಿ ಪ್ರಚಾರಕ್ಕೆ ಎರಡು ಸಲ ಮಾತ್ರ ಬಂದು ಹೋದಾಗ 1600 ಮತಗಳ ಅಂತರದಿಂದ ಜಯ ಗಳಿಸಿದ್ದರು. ಈಗ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಇದೆ. ಮುಂದಿನ ಮುಖ್ಯಮಂತ್ರಿ ಈ ಕ್ಷೇತ್ರದಿಂದ ಆಗಿದ್ದಲ್ಲಿ, ಮತ್ತಷ್ಟು ಅಭಿವೃದ್ಧಿ ಆಗುತ್ತದೆ ಎನ್ನುವುದು ಬಾದಾಮಿ ಮತದಾರರಲ್ಲಿ ಚರ್ಚೆ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಬಾದಾಮಿ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಅಂತರದಿಂದ ಜಯಗಳಿಸುತ್ತಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇದರಿಂದಾಗಿ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದತ್ತ ಮುಖ ಮಾಡುವಂತಾಗಿದೆ ಎಂಬ ವಿಚಾರ ಹರಿದಾಡುತ್ತಿದೆ. ಸಿದ್ದರಾಮಯ್ಯ ನಾಳೆ ಬಾದಾಮಿಯಲ್ಲಿ ರೋಡ್ ಶೋ ಮಾಡಿ, ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಎಂಬುದನ್ನು ಘೋಷಣೆ ಮಾಡುವ ಮೂಲಕ ಕ್ಷೇತ್ರದ ಜನತೆಗ ಉತ್ತರ ನೀಡುವರೆ ಕಾಯ್ದು ನೋಡಬೇಕಾಗಿದೆ.
ಇದನ್ನೂಓದಿ:ಗ್ರಾಮೀಣ ಭಾಗದ ಮಂದಿ ಕೆಲಸವಿಲ್ಲದೆ ಇರಬಾರದು: ಸಿಎಂ ಬಸವರಾಜ ಬೊಮ್ಮಾಯಿ