ಬಾಗಲಕೋಟೆ: ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎಂಬ ಗಾದೆಯಂತೆ ಬಿಜೆಪಿ ಪಕ್ಷದವರು ಅಧಿಕಾರ ಹಿಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಜಮಖಂಡಿ ಪಟ್ಟಣದಲ್ಲಿ ಪ್ರಜಾಧ್ವನಿ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು, ಅಲ್ಪಸಂಖ್ಯಾತರು, ಮಹಿಳೆಯರಿಗೆ ತೊಂದರೆ ಆಗುತ್ತದೆ ಎಂಬ ದೃಷ್ಟಿಯಿಂದ ಜೆಡಿಎಸ್ ಪಕ್ಷದ ಜೊತೆಗೆ ಕೈ ಜೋಡಿಸಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದೆವು. ಆದರೆ ಕುಮಾರಸ್ವಾಮಿ ಹೋಟೆಲ್ನಲ್ಲಿ ಕುಳಿತುಕೊಂಡು ಸರ್ಕಾರ ಕಳೆದುಕೊಂಡರು. ಬಳಿಕ ಸಿದ್ದರಾಮಯ್ಯರಿಂದ ಸರ್ಕಾರ ಬಿತ್ತು ಎಂದು ಅಪಪ್ರಚಾರ ಮಾಡಿದರು. ಕೊಟ್ಟ ಕುದುರೆ ಏರದವ ಶೂರನೂ ಅಲ್ಲ ವೀರನೂ ಅಲ್ಲ ಎಂದು ಹರಿಹಾಯ್ದರು.
ಇದನ್ನೇ ಕಾಯುತ್ತಾ ಇದ್ದ ಬಿಜೆಪಿ ಆಪರೇಷನ್ ಮಾಡಿಕೊಂಡು ಅಧಿಕಾರಕ್ಕೆ ಬಂತು ಎಂದು ಆರೋಪಿಸಿದರು. ದಮ್ಮು, ತಾಕ್ಕತ್ತು ಇದ್ದರೆ ಎಂದು ಹೇಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ. ನಮ್ಮ ಆಡಳಿತ ಇದ್ದಾಗ ಮಾಡಿದ ಸಾಧನೆ ಈಗ ಸರ್ಕಾರದ ಆಡಳಿತ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ಬಿಜೆಪಿ ಪಕ್ಷದವರಿಗೆ ಸುಳ್ಳು ಹೇಳುವುದೇ ಕೆಲಸವಾಗಿದೆ. ಸುಳ್ಳೇ ಅವರ ಮನೆ ದೇವರು ಎಂದರು.
ತಾಂಡಾಗಳಿಗೆ, ಅರಣ್ಯಗಳಿಗೆ ಜನರಿಗೆ ವಸತಿ ಸೇರಿದಂತೆ ಇತರ ಯೋಜನೆಗಳನ್ನು ನಾವು ಮಾಡಿದ್ದೇವೆ. ಆದರೆ ದೆಹಲಿಯಿಂದ ಮೋದಿ ಅವರು, ಅಮಿತ್ ಶಾ ಬಂದು ಹಕ್ಕು ಪತ್ರ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಉದ್ಯೋಗ ಕೊಡಿ ಎಂದು ಕೇಳಿದರೆ, ಪಕೋಡಾ ಮಾರಲಿಕ್ಕೆ ಹೋಗು ಅಂತಾರೆ.
ಬಿಜೆಪಿ ಪಕ್ಷದವರು ಬಂದರೆ ಅಚ್ಚೇ ದಿನ್ ಆಯೇಗಾ ಅಂದರು, ಮೋದಿ ಅವರೇ ಎಲ್ಲಿದೆ ಒಳ್ಳೆಯ ದಿನ?, ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದು ಕೆಟ್ಟ ದಿನಗಳ ಬಂದವು, ಚೌಕಿದಾರ ಎಂದು ಹೇಳುವ ಪ್ರಧಾನ ಮಂತ್ರಿ ಅವರಿಗೆ ಭ್ರಷ್ಟಾಚಾರ ಬಗ್ಗೆ ಗುತ್ತಿಗೆದಾರರು ಪತ್ರ ಬರೆದರು ಸಹ ಏನು ಮಾಡಿದರು?. ನಾ ತಿನ್ನಲ್ಲ, ತಿನ್ನಕ್ಕೆ ಬಿಡಲ್ಲ ಎನ್ನುವ ಮೋದಿ ಅವರು, ಭ್ರಷ್ಟಾಚಾರ ನಿಯಂತ್ರಣ ಏಕೆ ಮಾಡುತ್ತಿಲ್ಲ. ರೈತರು ಕಷ್ಟದಲ್ಲಿ ಇದ್ದಾಗ, ಅವರ ಸಹಾಯಕ್ಕೆ ಧಾವಿಸಬೇಕಾಗಿರುವುದು ಸರ್ಕಾರದ ಕೆಲಸ. ನಮ್ಮ ಸರ್ಕಾರದ ಅವಧಿಯಲ್ಲಿ, ನಿಂಬೆ ಹಣ್ಣು ಬೆಳೆಗಾರರಿಗೆ, ದ್ರಾಕ್ಷಿ ಬೆಳೆಗಾರರಿಗೆ ತೊಂದರೆ ಉಂಟಾಗಿದ್ದ ಪರಿಹಾರ ಧನ ನೀಡಿದ್ದೇವೆ. ರೈತರಿಗೆ ಸಾಲ ಮನ್ನಾ ಮಾಡಿದ್ದೇವೆ.
ಈಗಲೂ ನಾವು ಅಧಿಕಾರಕ್ಕೆ ಬಂದ ನಂತರ ಹತ್ತು ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತೇವೆ. ನಾವು ಕೊಟ್ಟ ಗ್ಯಾರಂಟಿ ಕಾರ್ಡ್ ಪ್ರಕಾರ ಯೋಜನೆ ನೀಡದೇ ಇದ್ದಲ್ಲಿ, ಒಂದು ಕ್ಷಣ ಅಧಿಕಾರದಲ್ಲಿ ಇರಲ್ಲ ಎಂದು ತಿಳಿಸಿದರು. ಕಳೆದ ದಿನ ಮುಖ್ಯಮಂತ್ರಿ ತೇರದಾಳ ಮತಕ್ಷೇತ್ರದಲ್ಲಿ ವಿವಿಧ ಯೋಜನೆಗಳಿಗೆ ಕಾಮಗಾರಿ ಚಾಲನೆ ನೀಡಿದ್ದಾರೆ. ಅವುಗಳನ್ನು ನಾವು ಇದ್ದಾಗ ಮಾಡಿದ್ದೇವು, ಎಲ್ಲ ಅಡುಗೆ ಮಾಡಿ ರೆಡಿ ಮಾಡುವವರು ನಾವು ಬಂದು ಬಡಿಸುವವರು ಅವರು. ಮುಂದಿನ ಚುನಾವಣೆಯಲ್ಲಿ ಪ್ರಸಕ್ತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ, ಹಿಂದೆ ಏನು ಮಾಡಿದ್ದೀರಿ. ಮುಂದೆ ಏನು ಮಾಡಬೇಕು, ರೈತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ, ಎಸ್ಸಿ ಎಸ್ಟಿ ಜನಾಂಗದವರ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿ, ಚುನಾವಣೆಯಲ್ಲಿ ಬಳಕೆ ಮಾಡಿಕೊಳ್ಳಲಿ ಎಂದರು.
ಇದನ್ನೂ ಓದಿ: ಬೆಳಗಾವಿಗೆ ಬೆಳಕು ತಂದ ಪ್ರಧಾನಿ ನರೇಂದ್ರ ಮೋದಿ: ಸಿಎಂ ಬೊಮ್ಮಾಯಿ