ಬಾಗಲಕೋಟೆ/ಧಾರವಾಡ : ಹುಬ್ಬಳ್ಳಿ ಗಲಭೆ ಆರೋಪಿಗಳ ಕುಟುಂಬಕ್ಕೆ ಶಾಸಕ ಜಮೀರ್ ಅಹ್ಮದ್ ಸಹಾಯ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಯಾರೋ ಕಿಟ್ ಕೊಟ್ರೆ, ನಾನು ಅದಕ್ಕೆ ರಿಯಾಕ್ಟ್ ಮಾಡಬೇಕಾ ಎಂದು ಮರು ಪ್ರಶ್ನಿಸಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಉಮ್ರಾದಲ್ಲಿದ್ದಾನೆ. ಅವರು ಯಾರೋ ಕೊಟ್ರೆ ನಾನೇನು ಮಾಡೋಕಾಗುತ್ತೆ?. ಯಾರೋ ಪುಡ್ ಕಿಟ್ ಕೊಟ್ರೆ ಜಮೀರ್ ಕೊಟ್ಟ ಅಂದ್ರೆ ಹೇಗೆ ಎಂದು ಗರಂ ಆದರು.
ಧಾರವಾಡದಲ್ಲಿ ನಲಪಾಡ್ ಪ್ರತಿಕ್ರಿಯೆ : ಇತ್ತ ಶಾಸಕ ಜಮೀರ್ ಅಹ್ಮದ್ ಸಹಾಯ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಅದು ಅವರವರ ವೈಯಕ್ತಿಕವಾದದ್ದು ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹ್ಯಾರಿಸ್ ನಲಪಾಡ್ ಪ್ರತಿಕ್ರಿಯಿಸಿದ್ದಾರೆ. ಧಾರವಾಡದಲ್ಲಿ ಜಲಮಂಡಳಿ ಹೊರಗುತ್ತಿಗೆ ಸಿಬ್ಬಂದಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಆರೋಪಿಗಳ ಕುಟುಂಬಕ್ಕೆ ಜಮೀರ್ ಅಹ್ಮದ್ ತಮ್ಮ ವೈಯಕ್ತಿಕ ವೇದಿಕೆಯಲ್ಲಿ ನೆರವು ಕೊಡುತ್ತಿದ್ದಾರೆ. ಪಕ್ಷದ ಬ್ಯಾನರ್‌ನಲ್ಲಿ ಕೊಡುತ್ತಿಲ್ಲ. ಪಕ್ಷದಿಂದ ಕೊಡುತ್ತಿದ್ದರೇ ನಾನು ಪ್ರತಿಕ್ರಿಯೆಸಬಹುದಿತ್ತು ಎಂದರು. ಇದೇ ವೇಳೆ ರಾಜ್ಯ ಬಿಜೆಪಿ ಸರ್ಕಾರ ಶೇ.40ರಷ್ಟು ಕಮಿಷನ್ನಲ್ಲೇ ಕಾಲ ಕಳೆಯುತ್ತಿದೆ. ಸರ್ಕಾರದಲ್ಲಿ ಇದ್ದವರಿಗೆ ಸಣ್ಣ-ಸಣ್ಣ ಸಿಬ್ಬಂದಿಯ ಗೋಳು ಕೇಳದಂತಾಗಿದೆ ಎಂದು ನಲಪಾಡ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನಿರ್ಮಾಪಕರಿಗೆ ವಂಚಿಸಿದ ಆರೋಪ : 'ಕಮಲಿ' ಧಾರಾವಾಹಿ ನಿರ್ದೇಶಕ ಅರೆಸ್ಟ್