ಬಾಗಲಕೋಟೆ: ಹಠಯೋಗಿಯಾಗಿ ಹುಟ್ಟಿ ಕರ್ಮಯೋಗಿಯಾಗಿ ಬೆಳೆದ ಶಿವಯೋಗಿ ಸಿದ್ದರಾಮೇಶ್ವರರ ತತ್ತ್ವ, ಸಿದ್ಧಾಂತ ಹಾಗೂ ಸಾಮಾಜಿಕ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ತಿಳಿಸಿದರು.
ನಿನ್ನೆ ನವನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಂದೇ ಸಮಾಜಕ್ಕೆ ಸೀಮಿತರಾಗಿರದೇ ಎಲ್ಲೆಡೆ ಸಮಾನತೆ ಸಾರಿದವರು. ಅಂತಹ ಶರಣರು ಜೀವಿಸಿದ ನಾಡಿನಲ್ಲಿ ನಾವು ಕೂಡಾ ಜನಿಸಿದ್ದು, ಅವರು ಹಾಕಿಕೊಟ್ಟ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ ರಾಜೇಂದ್ರ ಅವರು ಮಾತನಾಡಿ, ಸಮಾಜದಲ್ಲಿ ಮುಂದೆ ಬರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ. ವಿದ್ಯಾಭ್ಯಾಸದ ಮೇಲೆ ಹೆಚ್ಚು ಒತ್ತು ಕೊಡುವ ಮೂಲಕ ತಾಯಂದಿರು ತಮ್ಮ ಮಕ್ಕಳು ಒಳ್ಳೆಯ ಹುದ್ದೆಗಳನ್ನು ಪಡೆಯುವಂತೆ ಮಾಡಬೇಕೆಂದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ನಗರದ ಬಸವೇಶ್ವರ ವಿಜ್ಞಾನ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಸ್.ಡಿ ಕೆಂಗಲಗುತ್ತಿ ಮಾತನಾಡಿ, ಶಿವಯೋಗಿ ಸಿದ್ದರಾಮೇಶ್ವರರು ಬಸವಣ್ಣ, ಅಲ್ಲಮಪ್ರಭುಗಳು ಬಿಂಬಿಸಿದ ಆದರ್ಶ ಸಮಾಜದ ಕನಸು ನನಸಾಗಿಸುವ ನಿಟ್ಟಿನಲ್ಲಿ ಮುನ್ನಡೆದವರಾಗಿದ್ದಾರೆ. ಭಕ್ತಿಗೆ ಬಸವಣ್ಣ, ವೈರಾಗ್ಯಕ್ಕೆ ಅಲ್ಲಮ ಹೇಗೋ ಕಾಯಕಕ್ಕೆ ಸಿದ್ದರಾಮೇಶ್ವರ ಎಂದು ತಿಳಿಸಿದರು.
ಇನ್ನೂ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ನಿಮಿತ್ತ ಮೆರವಣಿಗೆ ಆಯೋಜಿಸಿದ್ದು, ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದ ಆವರಣದಿಂದ ಪ್ರಾರಂಭವಾಗಿ ನವನಗರದ ಬಸ್ ನಿಲ್ದಾಣ, ಎಲ್.ಐ.ಸಿ ವೃತ್ತದ ಮಾರ್ಗವಾಗಿ ಡಾ.ಬಿ.ಆರ್ ಅಂಬೇಡ್ಕರ ಭವನಕ್ಕೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳಾದ ಝಾಂಜ್ ಪಥಕ್, ಡೊಳ್ಳು ಕುಣಿತದ ಆಕರ್ಷಣೆ ಇತ್ತು. ಪೂರ್ಣ ಕುಂಭ ಹೊತ್ತ ಮಹಿಳೆಯರು ಆಕರ್ಷಣೀಯ ಕೇಂದ್ರ ಬಿಂದು ಆಗಿದ್ದರು. ಇದೇ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಡೊಳ್ಳು ಬಾರಿಸಿದ್ದು, ಎಲ್ಲರ ಗಮನ ಸೆಳೆಯಿತು.